ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿರುವ ಬಗ್ಗೆ ವರದಿಯಾಗಿದೆ.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಬೆನ್ನಲ್ಲೇ ಇದೀಗ, ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನ ಹೆಚ್ಚುವರಿ ಮಾಡಿದರೆ ಲಿಂಗಾಯತರಿಗೆ ಸ್ಥಾನ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ ಎಂದು ಹೇಳಿದರು.
ಎಂಬಿ ಪಾಟೀಲ್, ಈಶ್ವರ ಖಂಡ್ರೆ, ಎಸ್ಎಸ್ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಗುರುವಾರ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲೇ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀ, ಸಿದ್ದರಾಮಯ್ಯರನ್ನು ಉದ್ದೇಶಿಸಿ, ನಿಮಗೆ ಅನುಭವ ಇದೆ, ಈಗ ಡಿಕೆ ಶಿವಕುಮಾರ್ಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.