ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಮಾರ್ಚ್ 1ರಿಂದ ಮುಷ್ಕರ ಆರಂಭಿಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನೌಕರರ ಸಂಘದ ಜೊತೆ ಸಭೆ ನಡೆಸಿದರು. ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಮಾರ್ಚ್ 1ರಿಂದ ಮುಷ್ಕರ ಆರಂಭಿಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನೌಕರರ ಸಂಘದ ಜೊತೆ ಸಭೆ ನಡೆಸಿದರು.
ಇಂದು ರಾತ್ರಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಬಸವರಾಜ ಬೊಮ್ಮಾಯಿ ಸಾಲು ಸಾಲು ಸಭೆ ನಡೆಸಿದ್ದರು. ಈ ವೇಳೆ ಆಯೋಗದ ವರದಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಅವರು ಸ್ವಲ್ಪ ಸಮಯ ಕೇಳಿದ್ದಾರೆ. ಅಲ್ಲದೆ ಶೇಕಡ 40ರಷ್ಟು ವೇತನ ಹೆಚ್ಚಳ ಸಾಧ್ಯವಿಲ್ಲ. ಬದಲಿಗೆ 7 ಅಥವಾ 8ರಷ್ಟು ಮಾತ್ರ ವೇತನ ಹೆಚ್ಚಿಸಲು ಸಾಧ್ಯ ಎಂದು ಸಿಎಂ ಹೇಳಿದ್ದು ಇದಕ್ಕೆ ನೌಕರರ ಸಂಘದ ಪದಾಧಿಕಾರಿಗಳು ಸುತಾರಂ ಒಪ್ಪದೆ ಸಭೆಯಿಂದ ಹೊರನಡೆದರು.
ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ‘ನೌಕರರ ಸಂಘದ ಜತೆ ಸಕಾರಾತ್ಮಕವಾಗಿ ಸಭೆ ನಡೆಯಿತು. ಸದ್ಯ ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲ. ಇದಕ್ಕಾಗಿ ನಾವು ಸಮಯ ಕೇಳಿದ್ದೇವೆ. ಅವರು ಇದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು, ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಆದೇಶ ಹೊರಡಿಸಲು ಒಂದಷ್ಟು ಸಮಯ ಕೇಳಿದ್ದಾರೆ. ಹೀಗಾಗಿ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿ.ಎಸ್ ಷಡಾಕ್ಷರಿ ಅವರು, ಪೂರ್ವ ನಿರ್ಧಾರದಂತೆ ಇಂದಿನಿಂದ ಮುಷ್ಕರ ನಡೆಯಲಿದೆ. ನಮ್ಮ ಮತ್ತು ಸರ್ಕಾರ ನಡುವೆ ಮಾತುಕತೆಗಳು ನಡೆಯುತ್ತಿರುತ್ತವೆ ಎಂದು ಹೇಳಿದರು.