ಬೆಳಗಾವಿ : ನಾವು ಜಾತಿ ಜನಗಣತಿಯ ವಿರೋಧಿಗಳಲ್ಲ. ಆದರೆ, ಎಂಟು ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ವೀರಶೈವ ಲಿಂಗಾಯತ ಮಹಾಸಭಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ.
ಶುಕ್ರವಾರ ಬೆಳಗಾವಿ ನಗರದಲ್ಲಿ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದ ಲಿಂಗಾಯತ ಸಮುದಾಯದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದು, ಈ ಹಿಂದೆ ಕಚೇರಿಯಲ್ಲಿಯೇ ಕುಳಿತು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ಕಳುಹಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಆರ್ಥಿಕ-ಸಾಮಾಜಿಕ ಸಮೀಕ್ಷೆ ನಡೆಸಿದ ವೇಳೆ ನಮ್ಮ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನ್ಯಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದೆ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ಆದರೆ, ನಿಜವಾಗಿಯೂ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ. ಹೀಗಾಗಿ ಈ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎಂಬುದು ನಮ್ಮ ಮಹಾಸಭಾದ ಅಭಿಪ್ರಾಯ ಎಂದು ತಿಳಿಸಲಾಗಿದೆ.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ೮ ವರ್ಷದಷ್ಟು ಹಳೆಯದಾಗಿದ್ದು, ಇದನ್ನು ಈಗ ಯಥಾವತ್ ಅಂಗೀಕರಿಸುವುದು ಸೂಕ್ತವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜ್ಞಾನಿಕವಾಗಿ ಹೊಸದಾಗಿ, ಜಾತಿ ಜನಗಣತಿ ನಡೆಸಿ ವಾಸ್ತವಾಂಶ ಆಧಾರಿತವಾಗಿ ಅಂಕಿ-ಅಂಶಗಳನ್ನು ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ.