Home ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಕಟ ಆರೋಪ: ಅರ್ನಬ್ ಗೋಸ್ವಾಮಿ, ಆರ್. ಕನ್ನಡ ಸಂಪಾದಕರ...

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಕಟ ಆರೋಪ: ಅರ್ನಬ್ ಗೋಸ್ವಾಮಿ, ಆರ್. ಕನ್ನಡ ಸಂಪಾದಕರ ವಿರುದ್ಧ ಪ್ರಕರಣ ದಾಖಲು

24
0

ಬೆಂಗಳೂರು, ಮಾ.28: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ಸಾರ್ವಜನಿಕರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಡಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಆರ್. ಕನ್ನಡ ಸಂಪಾದಕ ನಿರಂಜನ್ ವಿರುದ್ಧ ನಗರದ ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಆರ್.ಕನ್ನಡ ಸುದ್ದಿವಾಹಿನಿಯು ಮಾ.27ರಂದು ಸಂಜೆ 7:15ಕ್ಕೆ ಎಂ.ಜಿ.ರಸ್ತೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವಾಗ ವಾಹನಗಳ ಸಂಚಾರ ತಡೆದು ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಾಡಿದ ವಿಡಿಯೋ ತುಣುಕೊಂದನ್ನು ಪ್ರಸಾರ ಮಾಡಿದೆ. ಆದರೆ, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿದ್ದು, ಬೆಂಗಳೂರಿನ ಕಡೆಗೆ ಪ್ರಯಾಣ ಮಾಡಿರಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಕಾರ್ಯದರ್ಶಿ ರವೀಂದ್ರ ಎಂ.ವಿ. ನೀಡಿರುವ ಪೊಲೀಸ್ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ತುಣುಕಿನ ಅಸಲಿಯತ್ತು ಪರಿಶೀಲಿಸದೆ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ಆರ್. ಕನ್ನಡ ಚಾನೆಲ್ ನಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ದೂರಿನನ್ವಯ ಆರ್.ಕನ್ನಡ (ರಿಪಬ್ಲಿಕ್) ವಾಹಿನಿಯ ಮಾಲಕ ಅರ್ನಬ್ ಗೋಸ್ವಾಮಿ ಮತ್ತು ಸಂಪಾದಕ ನಿರಂಜನ್ ವಿರುದ್ಧ ಕಲಂ 505(2)ರಡಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here