ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸ್ಸಾಂ ಜನತೆ ಯಾವ ಕಾರಣಕ್ಕೂ ಒಪ್ಪುವುದಿಲ್ಲ ಹಾಗೂ ಯಾವುದೇ ರಕ್ತಪಾತವಿಲ್ಲದೆ ಅದರ ವಿರುದ್ಧದ ಪ್ರತಿಭಟನೆಗಳು ಮುಂದುವರಿಯಬೇಕು ಎಂದು ಜನಪ್ರಿಯ ಗಾಯಕ ಝುಬೀನ್ ಗರ್ಗ್ ಕರೆ ನೀಡಿದ್ದಾರೆ.
ನಾನು ಈ ಕಾಯ್ದೆಯನ್ನು ವಿವಿಧ ವೇದಿಕೆಗಳಲ್ಲಿ ವಿರೋಧಿಸುವುದಾಗಿ ಹೇಳಿರುವ ಅವರು, ಈ ಕಾಯ್ದೆ ರದ್ದಾಗುವಂತೆ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಲು ಒಗ್ಗಟ್ಟಿನ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಈ ಕುರಿತು ಫೇಸ್ ಬುಕ್ ಪೋಸ್ಟ್ ಮಾಡಿರುವ ಝುಬೀನ್ ಗರ್ಗ್, “ನಾನು ಈ ಕಾಯ್ದೆಯು ಮಸೂದೆಯಾಗಿದ್ದ 2017ರಿಂದಲೂ ವಿರೋಧಿಸುತ್ತಾ ಬರುತ್ತಿದ್ದು, ನಾನು ನನ್ನ ನಿಲುವಿಗೆ ಈಗಲೂ ಬದ್ಧವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸುವುದು ಅನಿವಾರ್ಯವಾಗಿದ್ದು, ಅದಕ್ಕೆ ವಿವಿಧ ಮಾರ್ಗಗಳಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಸ್ಸಾಂನಲ್ಲಿ ಹಿಂದೂ ಮುಸ್ಲಿಂ ಎಂದು ವಿಭಜಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿರುವ ಝಬೀನ್ ಗರ್ಗ್, ಇಲ್ಲಿ ಕೇವಲ ಅಸ್ಸಾಂ ಮತ್ತು ಭಾರತದ ಪ್ರಜೆಗಳು ಮಾತ್ರ ಉಳಿಯಲಿದ್ದಾರೆಯೆ ಹೊರತು ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿನ ಅರ್ಜಿಯನ್ನು ಉಲ್ಲೇಖಿಸಿರುವ ಅವರು, ನಾವೆಲ್ಲರೂ ಈ ಅರ್ಜಿಯ ಪರವಾಗಿ ಒಗ್ಗಟ್ಟಾಗಿ ಕಾನೂನು ಹೋರಾಟ ನಡೆಸಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಹಾಗೂ ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.