ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಓರಿಯೆಂಟೇಶನ್ ಅಗತ್ಯವಿದೆ. ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂತಹ ಸಚಿವರು ಇದ್ದಾರೆ. ಅವರಿಗೆ ಯಾವುದರ ಬಗ್ಗೆಯೂ ಅರಿವಿಲ್ಲದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕರ್ನಾಟಕಕ್ಕೇ ಅವಮಾನ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಓರಿಯೆಂಟೇಶನ್ ಅಗತ್ಯವಿದೆ. ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂತಹ ಸಚಿವರು ಇದ್ದಾರೆ. ಅವರಿಗೆ ಯಾವುದರ ಬಗ್ಗೆಯೂ ಅರಿವಿಲ್ಲದೇ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕರ್ನಾಟಕಕ್ಕೇ ಅವಮಾನ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ(Pratap Simha) ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಡೆಯಲು, ಕೇಂದ್ರ ಸರ್ಕಾರ ಕಂಪ್ಯೂಟರ್ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ನಿನ್ನೆ ಆರೋಪ ಮಾಡಿದ್ದರು. ಇದಕ್ಕೆ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ, ಸಾರ್ವಜನಿಕವಾಗಿ ಏನು ಮಾತನಾಡಬೇಕು ಎಂದು ಇವರಿಗೆ ಗೊತ್ತಿಲ್ಲವೇ? ಈ ರೀತಿ ಅಸಂಬದ್ಧವಾದ ಹೇಳಿಕೆ ಕೊಟ್ಟರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಕಂಪ್ಯೂಟರ್ ಸರ್ವರ್ ನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ(Satish Jarakiholi) ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗುವುದು ಬೇಡ ಎಂದು ವ್ಯಂಗ್ಯವಾಡಿದರು.
ಕ್ರೈಸ್ತರು ಕೇಳಿದರೆ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೀರಿ. ಮುಸ್ಲಿಮರು ಕೇಳಿದ ಕೂಡಲೇ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೀರಿ. ಸಾಮಾನ್ಯ ಜನರು ವಿದ್ಯುತ್ ಬೆಲೆ ಕಡಿಮೆ ಮಾಡಿ ಎಂದು ಹೇಳಿದರೆ ಆಗುವುದಿಲ್ಲ ಅಂತೀರಾ? ನಿಮ್ಮದು ಜನ ವಿರೋಧಿ ಧೋರಣೆ. ಮಾತೆತ್ತಿದರೆ ಬಿಜೆಪಿಯನ್ನು ಬೈಯುವುದನ್ನು ಬಿಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸರ್ವರ್ ಡೌನ್ ಸಮಸ್ಯೆ; ಕೇಂದ್ರ ಸರ್ಕಾರ ರಾಜ್ಯದ ಸರ್ವರ್ ಹ್ಯಾಕ್ ಮಾಡಿದೆ: ಸತೀಶ್ ಜಾರಕಿಹೊಳಿ ಆರೋಪ
ನಮ್ಮ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಿ: ನಮ್ಮ ದೇಶದಲ್ಲಿ 29 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳಿವೆ. ಬೇರೆ ರಾಜ್ಯಗಳ ಯಾರೊಬ್ಬರಾದರೂ ಅಕ್ಕಿ ಕೊಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿಯವರನ್ನು ಬೈಯುವುದನ್ನು ನೋಡಿದ್ದಾರಾ, ಮಾತೆತ್ತಿದರೆ ಮೋದಿಯರನ್ನು ದೂಷಣೆ ಮಾಡುತ್ತಾರೆ. ಅಕ್ಕಿ ಸಮಸ್ಯೆಯಾಗುತ್ತಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳಿ, ಮಂಡಿ ತೆರೆದು ರಾಜ್ಯದಲ್ಲಿ ಭತ್ತ ಬೆಳೆಯುವ ರೈತರ ಬಳಿ ಭತ್ತ ಖರೀದಿ ಮಾಡಿ. ನಮ್ಮ ರೈತರು ರಾಜ್ಯದ ಜನತೆಗೆ ಕೊಡುವಷ್ಟು ಬೆಳೆದಿದ್ದಾರೆ. ಮಂಡಿ ತೆರೆದು ಕನಿಷ್ಠ ಬೆಲೆ ನಿಗದಿ ಮಾಡಿ ಖರೀದಿ ಮಾಡಿ. ವಿನಾಕರಣ ಮೋದಿ ಅವರನ್ನು ಬೈದುಕೊಂಡು ಓಡಾಡಬೇಡಿ. ಉಚಿತ ಅಕ್ಕಿ ನೀಡುವ ಭರವಸೆ ಕೊಡುವಾಗ ಮೋದಿ ಅವರನ್ನು ಕೇಳಿಕೊಂಡು ಕೊಟ್ಟಿದ್ದೀರಾ ಎಂದು ಕಿಡಿಕಾರಿದರು.
ಎಂಬಿ ಪಾಟೀಲ್ ಬಗ್ಗೆ ಅಪಾರ ಗೌರವವಿದೆ: ಸಚಿವ ಎಂಬಿ ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡವುದಿಲ್ಲವಾದರೆ ನಾನು ಸಹ ಅವರ ಬಗ್ಗೆ ಮಾತನಾಡುವುದಿಲ್ಲ. ಎಂಬಿ ಪಾಟೀಲ್ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರು ನಮ್ಮ ರಾಜ್ಯದ ನೀರಾವರಿ ಸಚಿವರು, ನಾನು ಸಹ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರ ಬಗ್ಗೆ ಜನರು ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಕೆಲಸಗಳು ಮಾತನಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು ಎಂದರು.
ಸಚಿವ ಡಾ ಎಚ್‌ಸಿ ಮಹದೇವಪ್ಪ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ವೀರೆಂದ್ರ ಪಾಟೀಲ್, ವೀರಪ್ಪ ಮೊಯ್ಲಿ ಹಾಗೂ ಬಂಗಾರಪ್ಪ ಮೂರು ಜನರನ್ನು 5 ವರ್ಷದಲ್ಲಿ ಬದಲಾಯಿಸಿದ್ದು ಯಾರು, ಈ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ, ಇದರ ಬಗ್ಗೆ ತಿಳಿದುಕೊಂಡು ಮಾತನಾಡಿದರೆ ಒಳ್ಳೆಯದು ಎಂದರು.