Home Uncategorized ಸಿಲ್ಕ್ಯಾರಾ ಸುರಂಗ ಕುಸಿತ: ಉತ್ತರಾಖಂಡ ಸರ್ಕಾರ ನೀಡಿದ್ದ ಚೆಕ್ ಅನ್ನು ನಗದೀಕರಿಸಲು ಮುಂದಾಗದ ಇಲಿ ರಂಧ್ರ...

ಸಿಲ್ಕ್ಯಾರಾ ಸುರಂಗ ಕುಸಿತ: ಉತ್ತರಾಖಂಡ ಸರ್ಕಾರ ನೀಡಿದ್ದ ಚೆಕ್ ಅನ್ನು ನಗದೀಕರಿಸಲು ಮುಂದಾಗದ ಇಲಿ ರಂಧ್ರ ಕೊರೆಯುವವರು!

26
0

ಡೆಹ್ರಾಡೂನ್: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಇಲಿ ರಂಧ್ರ ಕೊರೆಯುವವರು, ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೀಡಿದ್ದ ತಲಾ ರೂ. 50,000 ಚೆಕ್ ಅನ್ನು ನಗದೀಕರಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸುವಲ್ಲಿ ತಾವು ವಹಿಸಿದ ಪಾತ್ರಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಅವರ ಧೋರಣೆ ವ್ಯಕ್ತವಾಗಿಲ್ಲ ಎಂದು ಇಲಿ ರಂಧ‍್ರ ಕೊರೆಯುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಅದು ಅಸಹಾಯಕ ಪರಿಸ್ಥಿತಿಯಾಗಿತ್ತು. ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನದಲ್ಲಿ ಯಂತ್ರಗಳು ವಿಫಲವಾಗಿದ್ದಾಗ ನಾವು ಕಾರ್ಯಾಚರಣೆಗಿಳಿದಿದ್ದೆವು. ನಾವು ಯಾವುದೇ ಪೂರ್ವ ಶರತ್ತು ವಿಧಿಸದೆ, ನಮ್ಮ ಜೀವಗಳನ್ನು ಪಣಕ್ಕಿಟ್ಟು ಅವಶೇಷಗಳ ನಡುವೆ ರಂಧ್ರ ಕೊರೆದಿದ್ದೆವು. ನಾವು ಮುಖ್ಯಮಂತ್ರಿಯ ಧೋರಣೆಯನ್ನು ಪ್ರಶಂಸಿಸುತ್ತೇವಾದರೂ, ನಮಗೆ ನೀಡಲಾಗಿರುವ ಮೊತ್ತದ ಬಗ್ಗೆ ನಾವು ತೃಪ್ತರಾಗಿಲ್ಲ” ಎಂದು ಇಲಿ ರಂಧ್ರ ಕೊರಯುವ ತಂಡದ ನೇತೃತ್ವ ವಹಿಸಿದ್ದ ವಕೀಲ್ ಹಸನ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಇಲಿ ರಂಧ‍್ರ ಕೊರೆಯುವವರ ಪಾತ್ರವು ವೀರೋಚಿತವಾಗಿತ್ತಾದರೂ, ನಮಗೆ ಸರ್ಕಾರದಿಂದ ದೊರೆತಿರುವ ಮೊತ್ತವು ಅಸಮರ್ಪಕವಾಗಿರುವುದು ದುಃಖದಾಯಕವಾಗಿದೆ” ಎಂದು ಅವರು ಹೇಳಿದ್ದಾರೆ.

ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ 12 ಮಂದಿ ಇಲಿ ರಂಧ‍್ರ ಕೊರೆಯುವವರು ಭಾಗಿಯಾಗಿದ್ದರು ಹಾಗೂ ಅವರನ್ನೆಲ್ಲ ರಾಜ್ಯ ಸರ್ಕಾರವು ಸನ್ಮಾನಿಸಿತ್ತು. ಆದರೆ, ಅವರೆಲ್ಲ ತಮಗೆ ನೀಡಲಾಗಿರುವ ಚೆಕ್ ಗಳನ್ನು ನಗದೀಕರಿಸದಿರಲು ಸಾಮೂಹಿಕವಾಗಿ ನಿರ್ಣಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ನಮಗೆ ಚೆಕ್ ಅನ್ನು ಹಸ್ತಾಂತರಿಸಿದಾಗಲೇ ನಾವು ನಮ್ಮ ಅಸಮಾಧಾನವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆವು. ಆದರೆ, ಇನ್ನೊಂದೆರಡು ದಿನಗಳಲ್ಲಿ ಕೆಲ ಪ್ರಕಟಣೆಗಳು ಹೊರಬೀಳಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರಿಂದ ನಾವು ಅಲ್ಲಿಂದ ಮರಳಿದ್ದೆವು. ಆದರೆ, ಆ ಭರವಸೆಯನ್ನು ಉಳಿಸಿಕೊಳ್ಳದಿದ್ದರೆ ನಾವು ನಮಗೆ ನೀಡಲಾಗಿರುವ ಚೆಕ್ ಅನ್ನು ಮರಳಿಸುತ್ತೇವೆ” ಎಂದು ಹಸನ್ ಹೇಳಿದ್ದಾರೆ.

ನವೆಂಬರ್ 12ರಂದು ಸಿಲ್ಕ್ಯಾರಾ ಸುರಂಗವು ಭಾಗಶಃ ಕುಸಿದಿದ್ದರಿಂದ, ಆ ಸುರಂಗದಲ್ಲಿ 17 ದಿನಗಳ ಕಾಲ 41 ಕಾರ್ಮಿಕರು ಸಿಲುಕಿಕೊಂಡಿದ್ದರು.

LEAVE A REPLY

Please enter your comment!
Please enter your name here