ಹೊಸದಿಲ್ಲಿ : ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾ.22 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಜೆಡಿಎಸ್ ಅಸಮಾಧಾನಗೊಂಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಮುಖಂಡರು ನಮ್ಮ ಜೊತೆಗೆ ಇರುತ್ತಾರೆ. ಬಿಜೆಪಿ ಹೈಕಮಾಂಡ್ ನ ಅಂತಿಮ ತೀರ್ಮಾನವನ್ನು ಅವರಿಗೆ ಮನವರಿಕೆ ಮಾಡುತ್ತೇವೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮಾರ್ಚ್ 22 ರಂದು ಘೋಷಣೆಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಅನುಕೂಲ ಆಗಿದೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಾಗುತ್ತೆ. ಅಮಿತ್ ಶಾ, ಮೋದಿ ಜೊತೆಗೆ ಎಚ್. ಡಿ ದೇವೇಗೌಡರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಜೊತೆ ಅಂತಿಮವಾಗಿ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಮಿತ್ ಶಾ , ಜೆ.ಪಿ ನಡ್ಡಾ ಅವರ ಜೊತೆ ಐದು ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದೇವೆ. ಈ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೂರನೇ ಪಟ್ಟಿ ಬಿಡುಗಡೆ ಬಳಿಕ ರಾಜ್ಯದ್ಯಾಂತ ಪ್ರವಾಸ ಆರಂಭಿಸುತ್ತೇವೆ ಎಂದು ತಿಳಿಸಿದರು.
ಜೆ.ಸಿ.ಮಾಧುಸ್ವಾಮಿ ಸಹಕಾರದಿಂದ ನಾವು ಚುನಾವಣೆ ಗೆಲ್ಲಬೇಕಿದೆ. ಕರಡಿ ಸಂಗಣ್ಣ ಜೊತೆಗೆ ಮಾತನಾಡಿದ್ದೇನೆ. ಅವರು ನಿಷ್ಠಾವಂತ ಮುಖಂಡರು. ಅವರು ಬೇರೆ ಯಾವ ನಿರ್ಧಾರ ತೆಗೆದುಕೊಳ್ಳಬಾರದು. ಮುಂದೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗವುದು. ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ನುಡಿದರು.