ನಿವೃತ್ತ ಪ್ರಾಧ್ಯಾಪಕ ಹಾಗೂ ನಾಡಿನ ಖ್ಯಾತ ಬರಹಗಾರ ಕೆ ಎಸ್ ಭಗವಾನ್ ಮತ್ತೊಮ್ಮೆ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ: ನಿವೃತ್ತ ಪ್ರಾಧ್ಯಾಪಕ ಹಾಗೂ ನಾಡಿನ ಖ್ಯಾತ ಬರಹಗಾರ ಕೆ ಎಸ್ ಭಗವಾನ್ ಮತ್ತೊಮ್ಮೆ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೊನ್ನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ವಿಶ್ರಾಂತ ಶಿಕ್ಷಕ ಎನ್.ಎಂ.ತಿಮ್ಮೇಗೌಡ ಅವರು ರಚಿಸಿರುವ ನಾಲ್ಕು ಆಂಗ್ಲ ಪುಸ್ತಕಗಳು ಹಾಗೂ ಮೂರು ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶ್ರೀರಾಮಚಂದ್ರ ಆದರ್ಶ ವ್ಯಕ್ತಿಯಲ್ಲ, ಮರ್ಯಾದ ಪುರುಷೋತ್ತಮನೂ ಅಲ್ಲ, ಹಿಂದೂಗಳು ಪೂಜಿಸುವಂತಹ ದೇವರಂತೂ ಅಲ್ಲವೇ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ, ತನ್ನ ಗರ್ಭಿಣಿ ಹೆಂಡತಿಯನ್ನೇ ನಿರ್ದಾಕ್ಷಿಣ್ಯವಾಗಿ 18 ವರ್ಷಗಳ ಕಾಲ ಕಾಡಿಗಟ್ಟಿದ ನಿರ್ದಯಿ ಎಂದಿದ್ದಾರೆ.
ಶ್ರೀರಾಮ ಆದರ್ಶ ಪುರುಷ ಅಲ್ಲ: ನಮಗೆ ರಾಮರಾಜ್ಯ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಸರ್ವಜನಾಂಗದ ಶಾಂತಿಯ ತೋಟದ ಸಂವಿಧಾನ ಪರಿಕಲ್ಪನೆಯ ರಾಜ್ಯ. ಎಂದಿರುವ ಭಗವಾನ್ ತಮ್ಮ ಮಾತಿನುದ್ದಕ್ಕೂ ಪುರೋಹಿತ ಶಾಹಿ ವ್ಯವಸ್ಥೆ ಹಾಗೂ ಶ್ರೀ ರಾಮಚಂದ್ರನ ಬಗ್ಗೆ ತೀಕ್ಷ್ಣವಾಗಿ ಹೇಳುತ್ತಾ, ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸಿದರು.
ಪುರೋಹಿತ ಶಾಹಿ ವ್ಯವಸ್ಥೆಯಿಂದಾಗಿ ನಮ್ಮ ದೇಶ ಹಾಳಾಗಿ, ನೈತಿಕವಾಗಿ ಅಧ:ಪಥನದತ್ತ ಸಾಗುತ್ತಿದೆ. ನಮಗೆ ಈಗ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿ ಸಮಾನತೆಯ ಮಂತ್ರವನ್ನು ಕೊಡುಗೆಯಾಗಿ ನೀಡಿದ ಭಗವಾನ್ ಬುದ್ಧರ ತತ್ವ ಸಂದೇಶಗಳು ಬೇಕಾಗಿವೆ. ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳು ತತ್ವ ಸಂದೇಶಗಳು ನಮಗೆ ದಾರಿದೀಪವಾಗಬೇಕು. ಕುವೆಂಪು ಅವರನ್ನು ಜಾತಿಯ ವ್ಯವಸ್ಥೆಯಲ್ಲಿ ಗುರುತಿಸದೇ ಅವರು ನಮಗೆ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗೂ ವಿಶ್ವಮಾನವ ಸಂದೇಶದ ಆಧಾರದ ಮೇಲೆ ಅವರೊಬ್ಬ ಶ್ರೇಷ್ಠ ಸಂತರೆಂದು ಗುರುತಿಸಿ ಗೌರವಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ರಾಮನೊಬ್ಬ ಸಾಮಾನ್ಯ ಮನುಷ್ಯ ಇಂದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಲೆಮಾಡಿದವನಿಗೂ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಅವಕಾಶವಿದೆ. ಆದರೆ ತನ್ನ ಪತ್ನಿಯಾದ ಸೀತಾದೇವಿಗೆ ಒಂದು ಮಾತನಾಡಲು ಅವಕಾಶ ನೀಡದೇ ನಿರ್ದಯವಾಗಿ ಕಾಡಿಗಟ್ಟಲಾಯಿತು. ಸೀತಾದೇವಿ ಗರ್ಭಿಣಿ ಎಂದೂ ಪರಿಗಣಿಸದೇ ಕಾಡಿಗಟ್ಟಿದ ಶ್ರೀರಾಮಚಂದ್ರ ಹೇಗೆ ದೇವರಾಗುತ್ತಾನೆ? ಅವನೊಬ್ಬ ಸಾಮಾನ್ಯ ಮನುಷ್ಯ. ನಾವು ಶ್ರೀರಾಮನ ಮಂತ್ರವನ್ನು ಪಠಿಸಿ, ದಾಸ್ಯವನ್ನು ಒಪ್ಪಿಕೊಳ್ಳುವ ಬದಲಿಗೆ ಶಾಂತಿಪುರುಷ ಭಗವಾನ್ ಬುದ್ಧರ ತತ್ವ ಸಂದೇಶಗಳನ್ನು ಪಾಲಿಸಿದರೆ ಸಾಕು. ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮಾನತೆಯ ಸಮಾಜವನ್ನು ಸುಲಭವಾಗಿ ಕಟ್ಟಬಹುದಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ರಾಮರಾಜ್ಯ ಕಟ್ಟುವ ಬಗ್ಗೆ ಮಾತನಾಡುತ್ತಾರೆ. ವಾಲ್ಮೀಕಿ ರಾಮಾಯಣದ ಉತ್ತರಾ ಖಾಂಡವನ್ನು ಓದಿದರೆ ರಾಮ ಆದರ್ಶ ಪುರುಷ ಅಲ್ಲ ಎಂಬುದು ಗೊತ್ತಾಗುತ್ತದೆ. ಆತ 11 ಸಾವಿರ ವರ್ಷ ಆಳಲಿಲ್ಲ ಕೇವಲ 11 ವರ್ಷ ಮಾತ್ರ ಆಳಿದ್ದಾನೆ ಎಂದರು.
ರಾಮ ಮದ್ಯ ಸೇವಿಸುತ್ತಿದ್ದ: ಮಧ್ಯಾಹ್ನ ನಂತರ ರಾಮ ಸೀತೆಯ ಪಕ್ಕ ಕುಳಿತು ತನ್ನ ಇಡೀ ದಿನವನ್ನು ಕುಡಿಯುತ್ತಾ ಕಳೆಯುತ್ತಿದ್ದ. ಹೆಂಡತಿಯನ್ನು ಕಾಡಿಗೆ ಅಟ್ಟಿದ, ತಪಸ್ಸಿಗೆ ಕುಳಿತಿದ್ದ ಶಂಬುಕ ಎಂಬ ಶೂದ್ರನ ತಲೆ ಕತ್ತರಿಸಿದ, ಇಂತವನ್ನು ಆದರ್ಶ ಪುರುಷನೇ ಎಂದು ಕೆ ಎಸ್ ಭಗವಾನ್ ಕಠುವಾಗಿ ಟೀಕಿಸಿದ್ದಾರೆ.