ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನಿವೃತ್ತಿ ವಯಸ್ಸನ್ನು ಈಗಿರುವ 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ವೈದ್ಯರೊಂದಿಗೆ ಸಂವಾದ ನಡೆಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅನುಭವಿ ವೈದ್ಯರನ್ನು ಉಳಿಸಿಕೊಳ್ಳಲು ನಿವೃತ್ತಿ ವಯಸ್ಸನ್ನು ವಿಸ್ತರಿಸಲು ಸರ್ಕಾರ ಚಿಂತಿಸಿರುವುದಾಗಿ ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯಲ್ಲಿ ಸುಮಾರು 35 ವರ್ಷಗಳನ್ನು ಕಳೆದ ನಂತರ ನಿವೃತ್ತಿಗೂ ಮುನ್ನಾ ಸುಮಾರು 20-25 ವರ್ಷಗಳ ಸೇವೆ ಮಾತ್ರ ಸಲ್ಲಿಸಿದ್ದೇವೆ ಎಂಬ ಜಯದೇವ ಹಿರಿಯ ವೈದ್ಯರು ಕಳವಳ ವ್ಯಕ್ತಪಡಿಸಿದ ನಂತರ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯದ ಬಗ್ಗೆ ಸ್ವಲ್ಪ ಸಮಯದಿಂದ ಚರ್ಚಿಸುತ್ತಿದ್ದೇವೆ. ಉತ್ತಮ ಆರೋಗ್ಯ ಸೇವೆ ಖಾತ್ರಿ ಮತ್ತು ನಮ್ಮ ಅನುಭವಿ ವೈದ್ಯರನ್ನು ಸದುಪಯೋಗಪಡಿಸಿಕೊಳ್ಳಲು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸುವುದಾಗಿ ಪಾಟೀಲ್ ತಿಳಿಸಿದ್ದಾರೆ.
ಇದರ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಲಸ ಮಾಡುವ ವೈದ್ಯರಿಗೆ ವಿಮೆ ಯೋಜನೆಯನ್ನು ಪಾಟೀಲ್ ಘೋಷಿಸಿದ್ದಾರೆ. ಸದ್ಯ ಈ ವೈದ್ಯರು ಯಾವುದೇ ಸರ್ಕಾರಿ ವಿಮಾ ಯೋಜನೆಗೆ ಒಳಪಡುವುದಿಲ್ಲ, ಆದರೆ ರಾಜ್ಯವು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಲಭ್ಯವಿರುವ ಜೀವನ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು, ರೊಬೊಟಿಕ್ ಸರ್ಜರಿ ಸೌಲಭ್ಯ ಪರಿಚಯಿಸಲು ಜಯದೇವ ಆಸ್ಪತ್ರೆಗೆ ಸರ್ಕಾರಿ ಹೆಚ್ಚುವರಿ ಹಣವನ್ನು ಮಂಜೂರು ಮಾಡಲಿದೆ. ವೈದ್ಯಕೀಯ ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯಲು ಜಯದೇವ ಆಸ್ಪತ್ರೆಗೆ ಆಧುನಿಕ ಯಂತ್ರಗಳು ಮತ್ತು ಮೂಲಸೌಕರ್ಯ ಒದಗಿಸಲು ಬದ್ಧರಾಗಿದ್ದೇವೆ. ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಐದು ಹೆಚ್ಚುವರಿ ಆಪರೇಷನ್ ಥಿಯೇಟರ್‌ಗಳು, ಗುತ್ತಿಗೆ ಮತ್ತು ಹೊರಗುತ್ತಿಗೆ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗೆ ವೇತನ ಹೆಚ್ಚಳ ಸೇರಿದಂತೆ ಇತರ ಪ್ರಮುಖ ಉಪಕ್ರಮಗಳನ್ನು ಸಚಿವರು ಘೋಷಿಸಿದರು.