Home Uncategorized ಹಲವಾರು ವರ್ಷಗಳಿಂದ ದಾವೂದ್ ಇಬ್ರಾಹಿಂ ಆಸ್ತಿಗಳನ್ನು ಖರೀದಿಸುತ್ತಿರುವ ವ್ಯಕ್ತಿ ಯಾರು ಗೊತ್ತಾ?

ಹಲವಾರು ವರ್ಷಗಳಿಂದ ದಾವೂದ್ ಇಬ್ರಾಹಿಂ ಆಸ್ತಿಗಳನ್ನು ಖರೀದಿಸುತ್ತಿರುವ ವ್ಯಕ್ತಿ ಯಾರು ಗೊತ್ತಾ?

17
0

ಮುಂಬೈ: ದಾವೂದ್ ಇಬ್ರಾಹಿಂನ ನಾಲ್ಕು ಸ್ವತ್ತಿನ ಹರಾಜು ಶುಕ್ರವಾರ ಮುಕ್ತಾಯಗೊಂಡಿದ್ದು, ಈ ಪೈಕಿ ಎರಡು ಸ್ವತ್ತುಗಳಿಗೆ ಯಾವುದೇ ಬಿಡ್ ಮೊತ್ತ ದಾಖಲಾಗದಿದ್ದರೆ, ಇನ್ನೊಂದು ಸ್ವತ್ತಿನ ಮೀಸಲು ಬೆಲೆಯು ರೂ. 15,000 ಇದ್ದರೂ ಹುಬ್ಬೇರಿಸುವ ರೂ. 2 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ. ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ದಾವೂದ್ ಇಬ್ರಾಹಿಂ ಜಮೀನನ್ನು ಖರೀದಿಸಿರುವ ವ್ಯಕ್ತಿಯ ಪ್ರಕಾರ, ಆತ ಖರೀದಿಸಿರುವ ಜಮೀನಿನ ಸರ್ವೆ ನಂಬರ್ ಹಾಗೂ ಪಾವತಿಸಿರುವ ಮೊತ್ತವು ಸಂಖ್ಯಾಶಾಸ್ತ್ರದೊಂದಿಗೆ ಹೊಂದಾಣಿಕೆಯಾಗುತ್ತಿದ್ದು, ಅದು ಅವರಿಗೆ ಲಾಭವಾಗಲಿದೆ ಎನ್ನುತ್ತಾರೆ. ಅವರು ಅಲ್ಲಿ ಸನಾತನ ಶಾಲೆಯನ್ನು ತೆರೆಯಲು ಯೋಜಿಸಿದ್ದಾರೆ.

ನಾಲ್ಕು ಪ್ರತ್ಯೇಕ ಕೃಷಿ ಭೂಮಿಯನ್ನು ಕಳ್ಳಸಾಗಣೆದಾರರು ಹಾಗೂ ವಿದೇಶಿ ವಿನಿಮಯ ವಂಚಕರು (ಬೇನಾಮಿ ಆಸ್ತಿ) ಕಾಯ್ದೆ, 1976ರ ಅನ್ವಯ ಹರಾಜು ಹಾಕಲಾಯಿತು. ಆ ಸ್ವತ್ತುಗಳು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುಂಬೇಕ್ ಗ್ರಾಮದಲ್ಲಿವೆ. ಈ ಎಲ್ಲ ಸ್ವತ್ತುಗಳ ಒಟ್ಟಾರೆ ಮೀಸಲು ಬೆಲೆಯು ಕೇವಲ ರೂ. 19.22 ಲಕ್ಷವಾಗಿತ್ತು.

ಈ ಪೈಕಿ ಎರಡು ದೊಡ್ಡ ವಿಸ್ತೀರ್ಣದ ಜಮೀನಿಗೆ ಯಾವುದೇ ಬಿಡ್ ಬಾರದಿದ್ದರೆ, 1,730 ಚದರ ಮೀಟರ್ ವಿಸ್ತೀರ್ಣದ ಮತ್ತೊಂದು ಜಮೀನಿನ ಮೀಸಲು ಬೆಲೆ ರೂ. 1.56 ಲಕ್ಷ ಆಗಿದ್ದು, ರೂ. 3.28 ಲಕ್ಷಕ್ಕೆ ಮಾರಾಟವಾಯಿತು.

ಆದರೆ, ಅತ್ಯಂತ ಕಡಿಮೆ ವಿಸ್ತೀರ್ಣದ (170.98 ಚದರ ಮೀಟರ್) ಜಮೀನಿನ ಮೀಸಲು ಬೆಲೆ ರೂ. 15,440 ಆಗಿದ್ದರೂ, ಅದು ರೂ. 2.01 ಕೋಟಿಗೆ ಹರಾಜಾಯಿತು. ಈ ಜಮೀನನ್ನು ವಕೀಲ ಅಜಯ್ ಶ್ರೀವಾಸ್ತವ ಎಂಬುವವರು ಖರೀದಿಸಿದ್ದು, ಅವರು ಇದಕ್ಕೂ ಮುನ್ನ ಭೂಗತ ಲೋಕದ ದೊರೆಯ ಬಾಲ್ಯದ ಮನೆ ಸೇರಿದಂತೆ ಒಟ್ಟು ಮೂರು ಸ್ವತ್ತುಗಳನ್ನು ಅದೇ ಗ್ರಾಮದಲ್ಲಿ ಖರೀದಿಸಿದ್ದರು.

ಕೃಷಿ ಭೂಮಿಗೆ ಅಷ್ಟು ದೊಡ್ಡ ಮೊತ್ತ ತೆತ್ತು ಖರೀದಿಸಿದ್ದೇಕೆ ಎಂದು ಶಿವಸೇನೆಯ ಮಾಜಿ ನಾಯಕರೂ ಆದ ಶ‍್ರೀವಾಸ್ತವ ಅವರನ್ನು ಪ್ರಶ್ನಿಸಿದಾಗ, “ನಾನು ಸನಾತನ ಹಿಂದೂ ಆಗಿದ್ದೇನೆ. ನಾವು ನಮ್ಮ ಪಂಡಿತರ ಮಾತನ್ನು ಪಾಲಿಸುತ್ತೇವೆ. ಜಮೀನಿನ ಸರ್ವೆ ನಂಬರ್ ಹಾಗೂ ನಾನು ಅಂತಿಮಗೊಳಿಸಿದ ಪಾವತಿಯ ಮೊತ್ತವು ಒಟ್ಟುಗೂಡಿದಾಗ ಅದರಿಂದ ನನಗೆ ಲಾಭವಾಗುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಜಮೀನನ್ನು ಪರಿವರ್ತಿಸಿದ ನಂತರ, ಈ ಜಾಗದಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ” ಎಂದು ಹೇಳಿದ್ದಾರೆ.

“ನಾನು 2020ರಲ್ಲಿ ದಾವೂದ್ ಇಬ್ರಾಹಿಂ ಬಂಗಲೆಗೆ ಬಿಡ್ ಸಲ್ಲಿಸಿದ್ದೆ. ಸನಾತನ ಧರ್ಮ ಪಾಠಶಾಲೆ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದ್ದು, ಅದು ನೋಂದಣಿಯಾದ ನಂತರ ಅಲ್ಲಿಯೂ ಸನಾತನ ಶಾಲೆಯನ್ನು ಪ್ರಾರಂಭಿಸಲಾಗುವುದು” ಎಂದು ಅವರು ಹೇಳುತ್ತಾರೆ.

LEAVE A REPLY

Please enter your comment!
Please enter your name here