ಹಾವೇರಿ, ಮೇ 24: ತಿರುಪತಿ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರೊಂದು ಉರುಳಿಬಿದ್ದ ಪರಿಣಾಮ 7 ವರ್ಷದ ಬಾಲಕಿ ಸಹಿತ ನಾಲ್ವರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಇತರ ಆರು ಮಂದಿ ಗಾಯಗೊಂಡಿದ್ದಾರೆ.
ಹಾವೇರಿ ಪಟ್ಟಣದ ಅಶ್ವಿನಿ ನಗರದ ನಿವಾಸಿಗಳಾದ ಸುರೇಶ ವೀರಪ್ಪ ಜಾಡಿ (45), ಐಶ್ವರ್ಯಾ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7) ಮತ್ತು ಪವಿತ್ರಾ ಪ್ರಭುರಾಜ ಸಮಗಂಡಿ (28) ಮೃತಪಟ್ಟವರು.
ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ ಹೊನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ ಮತ್ತು ಗೀತಾ ಹೊನ್ನಪ್ಪ ಬಾರ್ಕಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆಂದು ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಾತ್ರಿ 12:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿ 4 ಪಿಬಿ ರಸ್ತೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.