ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಹಾವೇರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಹಾವೇರಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಹಾವೇರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿದಂತೆ ಬಹುತೇಕ ವಾರ್ಡ್ ಗಳು ಮಳೆಯಿಂದ ಸೋರುತ್ತಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ, ಮಹಿಳೆಯರು ಮತ್ತು ಮಕ್ಕಳನ್ನು ಮಾತನಾಡಿಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಜಿಲ್ಲಾಸ್ಪತ್ರೆಯ ಸರ್ಜನ್, ವೈದ್ಯಾಧಿಕಾರಿಗಳು, ಹೆಲ್ತ್ ಎಂಜಿನಿಯರ್ ಸೇರಿದಂತೆ ಎಲ್ಲರಿಗೂ ತರಾಟೆಗೆ ತೆಗೆದುಕೊಂಡರು. ಸ್ಥಳದಿಂದಲೇ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಕರೆ ಮಾಡಿ, ಮುಖ್ಯ ಎಂಜಿನಿಯರ್ ಮಂಜುನಾಥ್ ಅವರನ್ನು ತಕ್ಷಣ ಆನತುಗೊಳಿಸುವಂತೆ ಸೂಚಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಕೆಗೆ ಹಣಕ್ಕಾಗಿ ಒತ್ತಾಯಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ- ಸಿಎಂ ಸಿದ್ದರಾಮಯ್ಯ
ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ವಾರ್ಡ್, ತಾಯಂದಿರ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ, ಮಳೆಯಿಂದ ಸೋರುತ್ತಿರುವ ಗೋಡೆ, ಚಾವಣಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡದೆ, ಅವರ ವಾರ್ಡಿನ ಮೇಲ್ಭಾಗ ಹೇಗೆ ಕಟ್ಟಡ ಕಾಮಗಾರಿ ನಡೆಸಿದ್ದಿರಿ ಎಂದು ಸ್ಥಳದಲ್ಲೇ ಇದ್ದ ಜಿಲ್ಲಾ ಶಸ್ತ್ರಚಿಕಿತ್ಸಕ, ಎಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ನಾಲ್ಕು ದಿನಗಳಲ್ಲಿ ಮಳೆ ಸೋರಿಕೆ ತಡೆಗಟ್ಟಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.