ಭಾರತಮಾಲಾ ಯೋಜನೆ ಅಡಿಯಲ್ಲಿ ಹಾಸನದ ಶಾಂತಿಗ್ರಾಮದಿಂದ ಹಿರಿಯೂರುವರೆಗೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ಹುಳಿಯಾರು – ಹಿರಿಯೂರು- ಚಿತ್ರದುರ್ಗ-ರಾಯಚೂರು ಮೂಲಕ ಆಂಧ್ರಪ್ರದೇಶದ… ಹಾಸನ: ಭಾರತಮಾಲಾ ಯೋಜನೆ ಅಡಿಯಲ್ಲಿ ಹಾಸನದ ಶಾಂತಿಗ್ರಾಮದಿಂದ ಹಿರಿಯೂರುವರೆಗೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ಹುಳಿಯಾರು – ಹಿರಿಯೂರು- ಚಿತ್ರದುರ್ಗ-ರಾಯಚೂರು ಮೂಲಕ ಆಂಧ್ರಪ್ರದೇಶದ ವಿಶಾಕಪಟ್ಟಣಂಗೆ ಸಂಪರ್ಕ ಕಲ್ಪಿಸುತ್ತದೆ.
ಈ ಹೆದ್ದಾರಿ ಯೋಜನೆಯನ್ನು 2017 ರಲ್ಲಿ ಪ್ರಸ್ತಾಪಿಸಲಾಗಿದ್ದು, 2023 ರಲ್ಲಿ ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಹೊಸ ರಾಷ್ಟ್ರೀಯ ಹೆದ್ದಾರಿಯು ವಿಶಾಕಪಟ್ಟಣಂ ಮತ್ತು ಮಂಗಳೂರಿನ ಬಂದರುಗಳನ್ನು ಸಂಪರ್ಕಿಸುತ್ತದೆ.
ಇದನ್ನು ಓದಿ: ಹಾಸನದಲ್ಲಿ ಭೂಕಂಪದ ಅನುಭವ: ಜನರಲ್ಲಿ ಆತಂಕ
ಯೋಜನಾ ನಿರ್ದೇಶಕರಾದ ಹಂಸಾರಿಯಾ ಅವರ ಪ್ರಕಾರ, 114 ಕಿಮೀ ಅಭಿವೃದ್ಧಿಗೆ 250 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಶೇ. 90 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರು ಇಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ತಮಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು. ಇದರಲ್ಲಿ ಯಾವುದೇ ತಾರತಮ್ಯವಾಗಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು, ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಯ ಮಾದರಿಯಲ್ಲಿ ಉತ್ತಮ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲಾ ರೈತರಿಗೂ ಕೂಡ ಹೆಚ್ಚಿನ ಬೆಲೆಯಲ್ಲಿ ಪರಿಹಾರ ನಿಗದಿಪಡಿಸಲಾಗುವುದು. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.