ಧಾರವಾಡ: ಸಾಹಿತಿ ಗುರುಲಿಂಗ ಕಾಪಸೆ (96) ಅವರು ಮಂಗಳವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ.ಕೆ.ಲೋಣಿಯಲ್ಲಿ 1928 ಏಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಗಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕಾಪಸೆ ಅವರಿಗೆ ‘ವರದರಾಜ ಆದ್ಯ ಪ್ರಶಸ್ತಿ’, ‘ಆನಂದಕಂದ ಪ್ರಶಸ್ತಿ’, ’ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’ ಮೊದಲಾದ ಪುರಸ್ಕಾರಗಳು ಲಭಿಸಿವೆ.
‘ಹಲಸಂಗಿ ಗೆಳೆಯರು’, ‘ಅಕ್ಕಮಹಾದೇವಿ’, ‘ಅರವಿಂದರು’, ’ಬಸವೇಶ್ವರ’, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಇವು ಗುರುಲಿಂಗ ಅವರ ಪ್ರಧಾನ ಕೃತಿಗಳಾಗಿವೆ.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು, ಶಿಷ್ಯ ಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ನಗರದ ಸಪ್ತಾಪೂರದ ದುರ್ಗಾ ಕಾಲೊನಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ ಎರಡು ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.