ಕುಂದಾಪುರ, ಜೂ.15: ತಾಲೂಕಿನ ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯ ಮೂವತ್ತುಮುಡಿ, ಕನ್ನಡಕುದ್ರು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ತೆಂಗಿನ ಮರಗಳು ಕೀಟ ಬಾಧೆಯಿಂದ ಸಂಪೂರ್ಣ ಹಾನಿಗೊಳಗಾಗಿದ್ದು, ಈ ಪ್ರದೇಶಕ್ಕೆ ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಭೇಟಿ ಹಾಗೂ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಕೀಟಶಾಸ್ತ್ರಜ್ಞ ಡಾ. ರೇವಣ್ಣ ರೇವಣ್ಣನವರ್ ಮಾತನಾಡಿ, ಕರಾವಳಿ ಯಲ್ಲಿ ತೆಂಗು ವಾಣಿಜ್ಯ ಬೆಳೆಯಾದರೂ ಅವುಗಳ ಸಂರಕ್ಷಣೆ ಬಗ್ಗೆ ಬಹಳಷ್ಟು ರೈತರಿಗೆ ಮಾಹಿತಿಯಿಲ್ಲ. ಕೃಷಿ ಶಿಕ್ಷಣ ದಲ್ಲಿಯೂ ಉಡುಪಿ ಮುಂಚೂಣಿಗೆ ಬರಬೇಕಿದೆ ಎಂದು ತಿಳಿಸಿದರು.
ಇಲ್ಲಿ ತೆಂಗಿಗೆ ಕಪ್ಪು ತಲೆ ಹುಳ ಬಾಧೆ ವ್ಯಾಪಕವಾಗಿ ಆವರಿಸಿದ್ದು, ಇದಕ್ಕೆ ಪ್ರಮುಖ ಕಾರಣ ತೆಂಗಿನ ಮರಗಳಿಗೆ ನೀರಿ ನಂಶ ಕಡಿಮೆ ಆಗಿರುವುದು. ಇದಲ್ಲದೆ ಗೊಬ್ಬರ, ಪೋಷಕಾಂಶ, ರಾಸಾಯನಿಕ ಗೊಬ್ಬರವೂ ಕಡಿಮೆ ಯಾಗಿದೆ. ಆರೈಕೆಯಿಲ್ಲದೆ ಮರಗಳು ಸತ್ವಹೀನ ಆಗಿರುವುದೇ ಈ ಹುಳಗಳಿಗೆ ವರದಾನವಾಗಿದೆ. ಅದು ಸುಲಭವಾಗಿ ಆವರಿಸಿದೆ. ಮಳೆ ಆರಂಭವಾದ ಬಳಿಕ ಅದರ ಪ್ರಮಾಣ ಶೇ.10ಕ್ಕಿಳಿದಿದೆ. ಆದರೆ ಮುಂದಿನ ವರ್ಷವೂ ಮಳೆ ಕಡಿಮೆಯಾದ ಬಳಿಕ ಮತ್ತೆ ಬರುತ್ತದೆ. ಅದಕ್ಕೆ ಮರಗಳನ್ನು ಸದೃಢಗೊಳಿಸಬೇಕು, ಉತ್ತಮ ಗೊಬ್ಬರ ಕೊಡಬೇಕು, ಬೇಸಗೆಯಲ್ಲಿ ಔಷಧಿಗಿಂತ ನೀರಿನಾಂಶ ಅವಶ್ಯಕತೆ ಅಗತ್ಯ ಎಂದವರು ತೆಂಗು ಬೆಳಗಾರರಿಗೆ ಮಾಹಿತಿ ನೀಡಿದರು.
ನಿಯಂತ್ರಣ ಅಗತ್ಯ: ಇದನ್ನು ನಿರ್ಲಕ್ಷ್ಯ ಮಾಡಿದರೆ ಆಸುಪಾಸಿನ ತೋಟಗಳಿಗೂ ಹರಡುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಬೇರೆ ಬೇರೆ ವಿಧಾನಗಳ ಮೂಲಕ ನಿಯಂತ್ರಿಸುವ ಅಗತ್ಯವಿದೆ. ಮರಗಳಿಗೆ ಉತ್ತಮ ಪೋಷಣೆ, ಕೀಟಗಳಿಗೆ ಲೈಟ್‌ಟ್ರ್ಯಾಪ್ ಮೂಲಕ ಔಷಧಿ ಸಿಂಪಡಣೆ, ಈ ಹುಳಗಳನ್ನು ತಿನ್ನುವ ಹುಳಗಳನ್ನು ಇಲ್ಲಿಗೆ ತರಿಸಿ ಬಿಡುವ ಮೂಲಕ ಹತೋಟಿಗೆ ಪ್ರಯತ್ನಿಸಬಹುದು ಎಂದರು.
ತೆಂಗಿನ ತೋಟಗಳಲ್ಲಿ ಮಿಶ್ರ ಬೆಳೆ ಬೆಳೆಯುವ ಮೂಲಕವೂ ರೋಗವನ್ನು ನಿಯಂತ್ರಿಸಬಹುದು. ಈ ಹಿಂದೆಯೂ ಕರಾವಳಿ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದರಿಂದ ತೆಂಗಿನ ಮರಗಳಿಗೆ ಅಪಾಯವಿಲ್ಲ. ನಿಧಾನಕ್ಕೆ ಹತೋಟಿಗೆ ಬರು ತ್ತದೆ. ಬಾಧೆಗೊಳಗಾದ ತೆಂಗಿನ ಎಲೆಗಳನ್ನು ಅಕ್ಟೋಬರ್ ತಿಂಗಳಲ್ಲಿ ತೆಗೆದು ಸುಡಬೇಕು. ಇದರಿಂದ ಶೇ 50ರಷ್ಟು ಹುಳದ ಸಂತತಿ ನಾಶ ಆಗುತ್ತದೆ ಎಂದವರು ತಿಳಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಕನ್ನಡಕುದ್ರು ಪರಿಸರದಲ್ಲಿ ಕಪ್ಪು ತಲೆ ಹುಳ ಬಾಧೆಯಿಂದ ಹಾನಿಗೊಳಗಾದ ತೆಂಗಿನ ಮರಗಳನ್ನು ವೀಕ್ಷಿಸಿದರು.
ಕುಂದಾಪುರ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಜಿಲ್ಲಾ ರೈತ ಸಂಘದ ಪ್ರಮುಖರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಬಾಬು ಹೆಗ್ಡೆ, ಡಾ.ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದಯ ಕುಮಾರ ಶೆಟ್ಟಿ, ವಸಂತ ಹೆಗ್ಡೆ, ಮರತ್ತೂರು ಚಂದ್ರಶೇಖರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಶರತ್ಚಂದ್ರ ಶೆಟ್ಟಿ ಶೆಟ್ಟಿ, ಹೊಸಾಡು ಚಂದ್ರಶೇಖರ ಪೂಜಾರಿ, ಪದಾಧಿಕಾರಿಗಳು, ಸದಸ್ಯರು, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಹೆಮ್ಮಾಡಿ ಗ್ರಾಪಂ ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ರಾಘವೇಂದ್ರ ಪೂಜಾರಿ, ಶೈನಿ ಜೆ. ಕ್ರಾಸ್ತ, ರತ್ನಾ ದೇವಾಡಿಗ, ರೈತರಾದ ಚಂದ್ರ ಪೂಜಾರಿ, ಕಿರಣ್ ಕ್ರಾಸ್ತ, ಚಂದ್ರ, ರೈತ ಸಂಘದ ತ್ರಾಸಿ ವಲಯದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.