Home Uncategorized ಹೊಸ ಐಟಿ ಆಧಾರಿತ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ: ಸಚಿವ ಪ್ರಿಯಾಂಕ್ ಖರ್ಗೆ

ಹೊಸ ಐಟಿ ಆಧಾರಿತ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ: ಸಚಿವ ಪ್ರಿಯಾಂಕ್ ಖರ್ಗೆ

14
0

ಬೆಂಗಳೂರು: ರಾಜ್ಯ ವ್ಯಾಪಿ ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಹಾಯ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿ ಉತ್ತೇಜಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಂಗಳವಾರ ನಗರದ ಜೆಪಿಎನ್ ಸಭಾಂಗಣದಲ್ಲಿ ಪಾಂಚಜನ್ಯ ವಿದ್ಯಾಪೀಠ ವೆಲ್ ಪೇರ್ ಟ್ರಸ್ಟ್ ಹಾಗೂ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಎಐಟಿಸಿಇಎಸ್-2024 ಅಂತರ್ ರಾಷ್ಟ್ರೀಯ ಬಹುಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಐಟಿ ವಲಯದ ರಾಜಧಾನಿ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಪೇಟೆಗಳನ್ನು ನಿರ್ಮಾಣ ಮಾಡಿದ್ದು, ಇದು ಅಂದಿನ ಕಾಲದ ತಾಂತ್ರಿಕ ವಿನ್ಯಾಸ. ಈಗ ವಿಶೇಷ ಆರ್ಥಿಕ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇನ್ನೂ,ಆತ್ಮನಿರ್ಭರ ಭಾರತಕ್ಕೆ ಕರ್ನಾಟಕವೂ ಸಾಕಷ್ಟು ಬೆಂಬಲ ಸೂಚಿಸಿದೆ. ದೇಶದ ಐಟಿ ವಲಯಕ್ಕೆ ಬೆಂಗಳೂರು ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.

ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಂಪೆನಿಗಳು ತೊಡಗಿಸಿಕೊಂಡಿವೆ ಎಂದ ಅವರು, ಭವಿಷ್ಯದ ಸವಾಲುಗಳನ್ನು ಮತ್ತು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಎದುರಿಸಲು, ಕಾಲೇಜುಗಳಲ್ಲಿನ ಮಾನವ ಸಂಪನ್ಮೂಲವನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ಮಾಡಲು ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರಕಾರ ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಉನ್ನತ ಕೌಶಲ್ಯ ಸಲಹಾ ಸಮಿತಿಯನ್ನು ಸ್ಥಾಪಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ.ಜಿನ್-ಸಾಂಗ್ ಡಂಗ್, ಫ್ರಾನ್ಸ್ ಮೈನ್ಸ್ ಮತ್ತು ಟೆಲಿಕಾಂ ಪ್ರಾಧ್ಯಾಪಕ ಡಾ.ಬೆಸ್ಸನ್ ಅಬ್ದುಲ್ ರಜಾಕ್, ವೇದಿಕೆಯಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಡಾ.ಹಾರ್ದಿಕ್ ಜೆ.ಪಾಂಡೆ, ಡಾ.ಎ.ಚೊಕ್ಕಲಿಂಗ, ರೋಪಾರ್ ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ನಿತಿನ್ ಔಲುಕ್, ಪಾಂಚಜನ್ಯ ವಿದ್ಯಾಪೀಠ ವೆಲ್ ಪೇರ್ ಟ್ರಸ್ಟ್ ಅಧ್ಯಕ್ಷ ಎಸ್.ಮರಿಸ್ವಾಮಿ, ಕಾರ್ಯದರ್ಶಿ ಎಸ್. ಶಿವಮಲ್ಲು, ಖಜಾಂಜಿ ಡಾ.ಎಂ.ಮಹದೇವ ಸೇರಿದಂತೆ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here