ಪ್ರತಿ ವಾರ್ಡ್ಗೆ ₹3 ಕೋಟಿ: ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಭರ್ಜರಿ ಅಭಿವೃದ್ಧಿ ಘೋಷಣೆ
ಬೆಂಗಳೂರು: ಸ್ಥಳೀಯ ಮಟ್ಟದ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ 2026–27 ಸಾಲಿನ ಬಜೆಟ್ನಲ್ಲಿ ಪ್ರತಿ ವಾರ್ಡ್ಗೆ ಒಟ್ಟು ₹3 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ₹2.25 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ₹75 ಲಕ್ಷ ನಿರ್ವಹಣಾ ಕಾರ್ಯಗಳಿಗೆ ಮೀಸಲಿಡಲಾಗಿದೆ.
ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ನಿವಾಸಿ ಕಲ್ಯಾಣ ಸಂಘಗಳ (RWA) ಜೊತೆ ನಡೆಸಿದ ಮಾಸಿಕ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದರು. ಸಭೆಯಲ್ಲಿ ವಾರ್ಡ್ ಮಟ್ಟದ ಅಭಿವೃದ್ಧಿ ಯೋಜನೆಗಳು, ಬಜೆಟ್ ಅಂದಾಜುಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ನಗರದ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಫ್ಲೈಓವರ್, ಅಂಡರ್ಪಾಸ್ ಹಾಗೂ ರಸ್ತೆ ಅಗಲೀಕರಣ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು. ಈ ಅನುದಾನದಿಂದ ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಆರ್ಡಬ್ಲ್ಯುಎ ಪ್ರತಿನಿಧಿಗಳು ಹಲವು ಸಮಸ್ಯೆಗಳನ್ನ ಪ್ರಸ್ತಾಪಿಸಿದರು. ‘ಸಹಾಯ’ ಆಪ್ ಮತ್ತು 1533 ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಪರಿಹಾರವಾಗದ ದೂರುಗಳನ್ನು ‘ಕ್ಲೋಸ್’ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತು. ಹಿಎಸ್ಆರ್ ಲೇಔಟ್ನಲ್ಲಿ ಕಟ್ಟಡ ಉಲ್ಲಂಘನೆ, ರಾಜಕಾಲುವೆಗಳ ಸ್ವಚ್ಛತಾ ವಿಳಂಬ, ಪೌರಕಾರ್ಮಿಕರ ಕೊರತೆ ಮತ್ತು ಕಸ ಸಂಗ್ರಹಣೆಯಲ್ಲಿ ಆಗುತ್ತಿರುವ ವ್ಯತ್ಯಯಗಳನ್ನೂ ಉಲ್ಲೇಖಿಸಿದರು.
ಫುಟ್ಪಾತ್ ಅತಿಕ್ರಮಣದಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವುದಾಗಿ ತಿಳಿಸಿದ ಆರ್ಡಬ್ಲ್ಯುಎಗಳು, ಎಲ್ಲಾ ವಾರ್ಡ್ಗಳಲ್ಲಿ ರಸ್ತೆ ಗುರುತು ಮತ್ತು ಯಂತ್ರ ಚಾಲಿತ ಸ್ವಚ್ಛತಾ ವ್ಯವಸ್ಥೆ ವಿಸ್ತರಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಮೂಲದಲ್ಲೇ ಕಸ ವಿಂಗಡಣೆ ಕಡ್ಡಾಯವಾಗಿದ್ದು, ಪ್ರತಿ ವಾರ್ಡ್ನಲ್ಲಿ ಸ್ವಯಂಸೇವಕರನ್ನು ನಿಯೋಜಿಸಿ ಘನತ್ಯಾಜ್ಯ ನಿರ್ವಹಣೆಗೆ ಸಹಕರಿಸುವಂತೆ ಸೂಚಿಸಿದರು. ಕೊರಮಂಗಲದ ‘ಸಹಸ್’ ಮಾದರಿಯನ್ನು ಅನುಸರಿಸಲು ಸಲಹೆ ನೀಡಿದರು.
ಇದೇ ವೇಳೆ, ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು “ರೂಟ್ ಲೆವಲ್ ತಂಡಗಳನ್ನು” ರಚಿಸುವಂತೆ ಆರ್ಡಬ್ಲ್ಯುಎಗಳಿಗೆ ಸೂಚಿಸಲಾಯಿತು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಗಳನ್ನು ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯ ಪ್ರಮುಖ ಆಕರ್ಷಣೆಯಾಗಿ “ಬೆಂಗಳೂರು ದಕ್ಷಿಣ ನಗರ ಪಾಲಿಕೆ ನಿವಾಸಿ ಕಲ್ಯಾಣ ಸಂಘಗಳ ಫೆಡರೇಷನ್” ಅನ್ನು ಅಧಿಕೃತವಾಗಿ ಆರಂಭಿಸಲಾಯಿತು. ಎಲ್ಲಾ ಆರ್ಡಬ್ಲ್ಯುಎಗಳನ್ನು ಒಂದೇ ವೇದಿಕೆಗೆ ತರಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಪ್ರತಿ ವಾರ್ಡ್ಗೆ ₹3 ಕೋಟಿ ಅನುದಾನವು ಸ್ಥಳೀಯ ಅಭಿವೃದ್ಧಿಗೆ ದೊಡ್ಡ ಅವಕಾಶ. ಇದರ ಪ್ರಯೋಜನ ಜನರಿಗೆ ತಲುಪುವಂತೆ ಪಾರದರ್ಶಕತೆ ಮತ್ತು ವೇಗದ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ,” ಎಂದು ಆಯುಕ್ತರು ಭರವಸೆ ನೀಡಿದ್ದಾರೆ.
