ಬೆಂಗಳೂರು:
ಕರ್ನಾಟಕ ವಿಧಾನಸಭೆಯಲ್ಲಿ ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆದು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ 10 ಸದಸ್ಯರನ್ನು ಹಾಲಿ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಬಿಜೆಪಿಯ ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಮಾಡಿದ್ದಾರೆ. ಈ 10 ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.
ಕಲಾಪದ ವೇಳೆ ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಈ ಸಂಬಂಧ ಸ್ಪೀಕರ್ ಯುಟಿ ಖಾದರ್ ಅವರಿಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ. ಇದೀಗ ಈ ದೂರಿನ ಅಧಾರದ ಮೇಲೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿ, ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ರಮ ಕೈಗೊಂಡಿರುವ ಸ್ಪೀಕರ್ ಯುಟಿ ಖಾದರ್ ಅವರು ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿದ್ದಾರೆ.
#WATCH | Bengaluru, Karnataka: BJP MLAs create ruckus in the Karnataka Assembly; shouting against State Government's decision to depute IAS officers for an opposition party meeting held in Bengaluru
— ANI (@ANI) July 19, 2023
(Video source: Karnataka Assembly) pic.twitter.com/ABRSTkf6OL
ಇಷ್ಟಕ್ಕೂ ಅಗಿದ್ದೇನು?
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಪ್ರತಿಪಕ್ಷ ನಾಯಕರ ಸಭೆಗೆ ನಾಯಕರ ಆಹ್ವಾನಕ್ಕೆ ಐಎಎಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಉಪ ಸಭಾಪತಿಗಳು ಭೋಜನ ವಿರಾಮವನ್ನೂ ನೀಡದೇ ಕಲಾಪ ಮುಂದುವರೆಸಿದ್ದರಿಂದ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಪೀಕರ್ ನಿರ್ಧಾರದ ವಿರುದ್ಧ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಂಗಣದಲ್ಲಿ ಕಾಗದಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಕಲಾಪ ನಡೆಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು, ಸ್ಪೀಕರ್ ಯು ಟಿ ಖಾದರ್ ಅವರು ಸದನವನ್ನು ಊಟಕ್ಕೆ ಬಿಡುವುದಿಲ್ಲ ಮತ್ತು ಬಜೆಟ್ ಮತ್ತು ಬೇಡಿಕೆಗಳ ಮೇಲಿನ ಚರ್ಚೆ ಮುಂದುವರಿಯುತ್ತದೆ ಎಂದು ಹೇಳಿದರು. ಊಟಕ್ಕೆ ಹೋಗಲು ಬಯಸುವ ಸದಸ್ಯರು ಊಟ ಮಾಡಿ ಚರ್ಚೆಗೆ ಮರಳಬಹುದು ಎಂದು ಹೇಳಿದರು.
ಆದರೆ ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಯಾವ ನಿಯಮದ ಅಡಿಯಲ್ಲಿ ಭೋಜನ ವಿರಾಮವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸೋಮವಾರ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಿಗೆ ಏರ್ಪಡಿಸಿದ್ದ ಔತಣಕೂಟಕ್ಕೆ ಸ್ಪೀಕರ್ ಖಾದರ್ ಆಗಮಿಸಿದ್ದನ್ನು ಬಿಜೆಪಿ ಸದಸ್ಯರು ಪದೇ ಪದೇ ಪ್ರಸ್ತಾಪಿಸಿದರು. ಸದನ ನಡೆಸುತ್ತಿರುವ ರೀತಿಯನ್ನು ಆಕ್ಷೇಪಿಸಿ ಹಲವು ಸದಸ್ಯರು ಉಪಸಭಾಪತಿಯವರತ್ತ ಪದೇ ಪದೇ ಪತ್ರ ಎಸೆದ ಕಾರಣ, ವಿಧಾನಸಭೆ ಮಾರ್ಷಲ್‌ಗಳು ಸಭಾಪತಿಯನ್ನು ಸುತ್ತುವರಿದು ಉಪ ಸಬಾಪತಿ ಲಮಾಣಿ ರಕ್ಷಣೆಗೆ ಯತ್ನಿಸಿದರು. ನಂತರ ಉಪಸಭಾಪತಿಯವರು ಸದನವನ್ನು ಮುಂದೂಡಿದರು.
ಅಧಿಕಾರಿಗಳ ದುರ್ಬಳಕೆ ಆರೋಪ
2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ಸಭೆ ನಡೆಸಿದ್ದ ಮೈತ್ರಿಕೂಟದ ಮುಖಂಡರ ಸೇವೆಗೆ ಕಾಂಗ್ರೆಸ್ ಸರ್ಕಾರ 30 ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಉಪಸಭಾಧ್ಯಕ್ಷರು ಸದನವನ್ನು ಮುಂದೂಡಿದ ನಂತರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಯೋಚಿಸುತ್ತಿರುವುದಾಗಿ ಹೇಳಿದರು, ಆದರೆ ಕಾಂಗ್ರೆಸ್ ಶಾಸಕರು “ಅಶಿಸ್ತಿನ ವರ್ತನೆ”ಗಾಗಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿಯವರು ಕ್ಷಮೆ ಕೇಳಬೇಕು
ಪ್ರೋಟೋಕಾಲ್ ಪ್ರಕಾರ, ಸ್ಟೇಟ್ ಗೆಸ್ಟ್ ಎಂದು ಅಧಿಕಾರಿಗಳು ನಾಯಕರನ್ನ ಕರ್ಕೊಂಡು ಬಂದಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳು ನಡ್ಕೊಂಡಿದಾರೆ. ಸಿಂಪಲ್ ವಿಚಾರಕ್ಕೆ ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷನ ಮೇಲೆ ಪೇಪರ್ ಎಸೀತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಕಾನೂನು ಕ್ರಮ ಆಗಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿದರು.
ಅಮಾನತುಗೊಂಡ ಶಾಸಕರನ್ನು ಹೊರಹಾಕಿದ ಮಾರ್ಷಲ್ಸ್
ವಿಧಾನಸಭೆಯಿಂದ ಅಮಾನತುಗೊಂಡವರನ್ನು ಮಾರ್ಷಲ್ಸ್ ಹೊರಹಾಕಿದರು. ಮತ್ತೊಂದೆಡೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಪೀಕರ್ ಕಚೇರಿ ಮೆಟ್ಟಿಲು ಮೇಲೆ ಕುಳಿತು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡಲಾಗುತ್ತಿದೆ.