ಬೆಂಗಳೂರು: ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 40 ಕಿ.ಮೀ ವ್ಯಾಪ್ತಿಯೊಳಗೆ ಸುಮಾರು 100 ಎಕರೆ ಭೂಮಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಬೆಟ್ಟ ಪ್ರದೇಶದ ಅಕ್ಕಪಕ್ಕ 100 ಎಕರೆ ಜಮೀನು ಒಪ್ಪಿತ ಆಧಾರದ ಮೇಲೆ ದೊರೆತರೆ, ಅದನ್ನು ಖರೀದಿ ಮಾಡಿ ಸ್ವಾಧೀನಪಡಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ,” ಎಂದರು.
ಭೂ ಮಾಲೀಕರು, ರೈತರು ಹಾಗೂ ವ್ಯಾಪಾರಿಗಳು ಮುಂದೆ ಬಂದು ಜಮೀನು ನೀಡಬಹುದು ಎಂದು ಆಹ್ವಾನಿಸಿದ ಅವರು, “ಆ ಸ್ಥಳಕ್ಕೆ ಪ್ರತ್ಯೇಕ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ,” ಎಂದು ತಿಳಿಸಿದರು.
ನಗರದ ವೇಗವಾದ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಕಸದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ದೀರ್ಘಕಾಲಿಕ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಆಡಳಿತವು ಶೀಘ್ರದಲ್ಲೇ ಭೂ ಮಾಲೀಕರೊಂದಿಗೆ ಚರ್ಚೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
