ಬೆಂಗಳೂರು: “ನಾಡಪ್ರಭು ಕೆಂಪೇಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ₹103 ಕೋಟಿ ಅನುದಾನ ಹಾಗೂ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.
“ಮಾಗಡಿ ಕೋಟೆಯ ಪುನರುಜ್ಜೀವನ ಕೆಲಸ ಶೇ. 50ರಷ್ಟು ಮುಗಿದಿದೆ. ಆಂತರಿಕ ಸಮನ್ವಯತೆ ಸಾಧಿಸಲು ಸಮಿತಿಯನ್ನು ರಚಿಸಲಾಗುವುದು. ಕೆಂಪೇಗೌಡರ ಸಮಾಧಿ ಸ್ಥಳದಲ್ಲಿ 10 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು ಶೇ.90 ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಇದಕ್ಕೂ ಅನುದಾನವನ್ನು ಮೀಸಲಿಡಲಾಗಿದೆ” ಎಂದರು.
ಇಂದು ವಿಧಾನಸೌಧದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಶಾಸಕರಾದ ಶ್ರೀ ಎಚ್.ಸಿ. ಬಾಲಕೃಷ್ಣ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಾಗಡಿ ಕೋಟೆ ಕೆಂಪೇಗೌಡರ ವೀರ ಸಮಾಧಿ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಅಭಿವೃದ್ಧಿ ಯೋಜನೆ ಬಗ್ಗೆ… pic.twitter.com/RbfWdk3duJ
— DK Shivakumar (@DKShivakumar) October 4, 2025
“ನಗರ ವಿನ್ಯಾಸ ಕಾಲೇಜಿನಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತೆ ನಾವು ಆಲೋಚನೆ ಮಾಡಿದ್ದೇವೆ. ಇದಕ್ಕಾಗಿ ವಿಟಿಯು ಅವರು ತಯಾರಿಸಿದ ಪಠ್ಯಕ್ರಮ ಅಳವಡಿಸಿಕೊಳ್ಳುವ ಸಂಬಂಧ ಅವರ ಜೊತೆ ಚರ್ಚೆ ನಡೆಸಲಾಗುವುದು. ಸುಮ್ಮನಹಳ್ಳಿಯ ಬಳಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡ ಭವನಕ್ಕೆ ಅತ್ಯುತ್ತಮ ಕಟ್ಟಡ ವಿನ್ಯಾಸವನ್ನು ನೀಡಲು ವಾಸ್ತುಶಿಲ್ಪಿಗಳಿಂದ ವಿನ್ಯಾಸ ನೀಡಲು ಆಹ್ವಾನ ನೀಡಲಾಗಿದೆ” ಎಂದರು.
“ನಗರ ವಿನ್ಯಾಸ ಅಧ್ಯಯನ ಮಾಡಿದವರಿಗೆ ಬಿಜಿಎ ಮತ್ತು ಪಾಲಿಕೆಗಳಲ್ಲಿ ಉದ್ಯೋಗ ನೀಡಬೇಕಿದೆ. ಏಕೆಂದರೆ ಬೆಂಗಳೂರಿಗೆ ನಗರ ವಿನ್ಯಾಸಕಾರರ ಅವಶ್ಯಕತೆ ಹೆಚ್ಚಿದೆ. ಕಾಲೇಜು ನಿರ್ಮಾಣಕ್ಕಾಗಿ ನಗರಾಭಿವೃದ್ದಿ ಇಲಾಖೆ, ಕೆಂಪೇಗೌಡ ಪ್ರಾಧಿಕಾರ ಮತ್ತು ಜಿಬಿಎಯಿಂದ ಅನುದಾನ ಮೀಸಲಿಡಲಾಗಿದೆ. ಏರ್ ಪೋರ್ಟ್ ಬಳಿಯ ಕೆಂಪೇಗೌಡ ಪ್ರತಿಮೆ ಬಳಿ ಥೀಮ್ ಪಾರ್ಕ್ ನಿರ್ಮಾಣ ಸಂಬಂಧ ಸಚಿವರಾದ ಕೃಷ್ಣೇಭೈರೇಗೌಡರಿಗೆ ಜವಾಬ್ದಾರಿ ವಹಿಸಲಾಗಿದೆ” ಎಂದರು.
