ಆರೋಗ್ಯ ಕವಚ 108 ಆ್ಯಂಬುಲೆನ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದನ್ನು ವಿರೋಧಿಸಿ ಮತ್ತೆ ಹೋರಾಟ ನಡೆಸಲು ನೌಕರರು ಮುಂದಾಗಿದ್ದಾರೆ. ಬೆಂಗಳೂರು: ಆರೋಗ್ಯ ಕವಚ 108 ಆ್ಯಂಬುಲೆನ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದನ್ನು ವಿರೋಧಿಸಿ ಮತ್ತೆ ಹೋರಾಟ ನಡೆಸಲು ನೌಕರರು ಮುಂದಾಗಿದ್ದಾರೆ.
ಸರಿಯಾಗಿ ವೇತನ ಆಗದೆ ಸಮಸ್ಯೆ ಅನುಭವಿಸುವಂತಾಗಿದೆ. ಕುಟುಂಬ ನಿರ್ವಹಣೆ ಮಾಡಲು ನೌಕರರು ಪರದಾಡಬೇಕಾದ ಪರಿಸ್ಥಿತಿ ಬಂದೊಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಾಕಿ ಇರುವ ನಾಲ್ಕು ತಿಂಗಳ ಸಂಬಳವನ್ನು ಕೂಡಲೇ ಪಾವತಿಸಬೇಕು ಎಂದು 108 ಆ್ಯಂಬುಲೆನ್ಸ್ ನೌಕರರ ಸಂಘ ಒತ್ತಾಯಿಸಿದೆ.
ಕಳೆದ ನಾಲ್ಕು ತಿಂಗಳಿನಿಂದ ವೇತನವಾಗದೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಜುಲೈ 7ರ ಒಳಗಾಗಿ ಸಂಬಂಧಪಟ್ಟ ಸಂಸ್ಥೆ ಸಂಬಳ ಪಾವತಿ ಮಾಡಬೇಕು. ಇಲ್ಲದೇ ಹೋದಲ್ಲಿ ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಕೇವಲ ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಮಸ್ಯೆಯಷ್ಟೇ ಅಲ್ಲ, ನಮ್ಮ ವೇತನವನ್ನೂ ನೀಡಲಾಗಿಲ್ಲ. ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ವಲಸಿಗರಾದ ನನ್ನಂತೆ ಇನ್ನೂ ಅನೇಕರು ಬಾಡಿಗೆ ಕಟ್ಟದೆ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆಂದು ನರ್ಸಿಂಗ್ ಆಫೀಸರ್ ಒಬ್ಬರು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಜಂಟಿಯಾಗಿ ಆರೋಗ್ಯ ಇಲಾಖೆಗೆ ಪತ್ರ ಬರೆದಿರುವ ನೌಕರರು, ಜು.7ರೊಳಗೆ ನಾಲ್ಕು ತಿಂಗಳ ಬಾಕಿ ವೇತನ ನೀಡದಿದ್ದರೆ ಜುಲೈ 8ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ 108 ಆಂಬ್ಯುಲೆನ್ಸ್ ಕಾರ್ಯಾಚರಣೆಯನ್ನು ನಿರ್ವಹಿಸುವ ಜಿವಿಕೆ-ಇಎಂಆರ್‌ಐನ ಅಧಿಕಾರಿಯೊಬ್ಬರು ಮಾತನಾಡಿ, “ಮಾರ್ಚ್‌ನಿಂದ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ, ಇದರಿಂದಾಗಿ ವೇತನ ಪಾವತಿಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇಲಾಖಾ ವಿಚಾರಣೆ ಮತ್ತು ಲೋಕಾಯುಕ್ತ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿರುವ ಕಾರಣ 108 ಆಂಬ್ಯುಲೆನ್ಸ್ ಸೇವೆಗಳ ಟೆಂಡರ್ ಪ್ರಕ್ರಿಯೆಗಳನ್ನು ಜೂನ್‌ನಲ್ಲಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.