108 ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಬಾಕಿ ವೇತನದ ಮೊದಲ ಕಂತನ್ನು ಬಿಡುಗಡೆ ಮಾಡಿದ್ದು, ಉಳಿದ ಕಂತುಗಳನ್ನು ಶೀಘ್ರದಲ್ಲೇ ಪಾವತಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಬೆಂಗಳೂರು: 108 ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಬಾಕಿ ವೇತನದ ಮೊದಲ ಕಂತನ್ನು ಬಿಡುಗಡೆ ಮಾಡಿದ್ದು, ಉಳಿದ ಕಂತುಗಳನ್ನು ಶೀಘ್ರದಲ್ಲೇ ಪಾವತಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಆಂಬ್ಯುಲೆನ್ಸ್ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು (ಅರೆವೈದ್ಯಕೀಯ ಸಿಬ್ಬಂದಿ) ಸೇರಿದಂತೆ ರಾಜ್ಯಾದ್ಯಂತ ಸುಮಾರು 4,000 ಉದ್ಯೋಗಿಗಳು ನಾಲ್ಕು ತಿಂಗಳಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಜೂನ್‌ನಲ್ಲಿ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘವು ಸಂಬಳ ನೀಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಅಲ್ಲದೇ ಜುಲೈ 8 ರವರೆಗಿನ ಬಾಕಿಯನ್ನು ಪಾವತಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು, ಇಲ್ಲದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು.
ಸೋಮವಾರ ಈ ಸಂಬಂಧ ಸಚಿವರು 108 ಸಿಬ್ಬಂದಿಯೊಂದಿಗೆ ಸಭೆ ನಡೆಸಿ ವೇತನ ಬಾಕಿ ಸಮಸ್ಯೆ ಬಗೆಹರಿಸುವ ಜೊತೆಗೆ ಅವರ ಕುಂದುಕೊರತೆ ಹಾಗೂ ಬೇಡಿಕೆಗಳ ಕುರಿತು ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ 108 ಆಂಬ್ಯುಲೆನ್ಸ್‌ಗಳ ಗುತ್ತಿಗೆಯಲ್ಲಿನ ಲೋಪಗಳ ಪರಿಣಾಮವಾಗಿ ವೇತನ ಮಂಜೂರಾತಿಗೆ ತೊಂದರೆಯಾಗಿದೆ. ಇನ್ನು ಮುಂದೆ ಸಿಬ್ಬಂದಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕರ್ನಾಟಕದಲ್ಲಿ 108 ಆಂಬ್ಯುಲೆನ್ಸ್ ಸೇವೆಗಳನ್ನು ನಿರ್ವಹಿಸುತ್ತಿರುವ GVK-EMRI ಕಂಪನಿಗೆ 40 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಪಾವತಿಸಬೇಕಾಗಿದೆ. ಮೊದಲ ಕಂತಿನ 14 ಕೋಟಿ ರೂ.ಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದ್ದು, ಉಳಿದವುಗಳನ್ನು ಶೀಘ್ರವೇ ಮಂಜೂರು ಮಾಡುವ ನಿರೀಕ್ಷೆಯಿದೆ.
ನೌಕರರು ಶೇ.15ರಷ್ಟು ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದು, ಮುಂಬರುವ ಸಭೆಯಲ್ಲಿ ಈ ಬಗ್ಗೆಯೂ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.