
13-month-old dead child's urine embryo successfully transplanted to 30-year-old man in Bengaluru
ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣ
ಬೆಂಗಳೂರು:
ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್ ಎನ್-ಬ್ಲಾಕ್” ವಿಧಾನದ ಮೂಲಕ ಕಸಿ ಮಾಡಲಾಗಿದ್ದು, ಈ ಪ್ರಕರಣ ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣವಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ ಶ್ರೀಹರ್ಷ ಹರಿನಾಥ ಅವರ ತಂಡವು ಈ ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿ, ಹಿಮೋಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಇವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಈ ಮಧ್ಯೆ, 13 ತಿಂಗಳ ಮಗುವೊಂದು ಉಸಿರುಗಟ್ಟಿ ಸಾವಪ್ಪಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು. ಈ ಮಗು ಕೇವಲ 7.3 ಕೆಜಿ ಹೊಂದಿತ್ತು. ೩೦ ವರ್ಷದ ಈ ವ್ಯಕ್ತಿಯೂ 50 ಕೆಜಿ ತೂಕವುಳ್ಳವರಾಗಿದ್ದರು. ಇವರಿಗೆ ಮಗುವಿನ ಕಿಡ್ನಿ ಕಸಿ ಮಾಡುವುದು ಸವಾಲಿನ ಕೆಲಸವೇ ಸರಿ. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿ, ರೋಬೋಟಿಕ್ ಎನ್-ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಲಾಯಿತು.
ರೋಬೋಟಿಕ್ ಎನ್-ಬ್ಲಾಕ್, ಈ ನವೀನ ತಂತ್ರವು ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಶಸ್ತ್ರಚಿಕಿತ್ಸೆಯು ಸುಮಾರು ನಾಲ್ಕು ಗಂಟೆಗಳ ವರೆಗೆ ಸುದೀರ್ಘವಾಗಿ ಸಾಗಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಯಿತು. 12 ದಿನಗಳ ಬಳಿಕ ಅವರನ್ನು ಬಿಡುಗಡೆ ಗೊಳಿಸಲಾಯಿತು ಎಂದು ವಿವರಣೆ ನೀಡಿದರು.
ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದು ಒಂದು ಸವಾಲೆ ಸರಿ. ಈ ವಿನೂತನ ಪ್ರಯತ್ನವನ್ನು ನಮ್ಮ ವೈದ್ಯರ ತಂಡ ಇರುವ ನೂತನ ಟೆಕ್ನಾಲಜಿ ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಮೂಲಕ ಇದು ವಿಶ್ವದಲ್ಲಿಯೇ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಿದರು.