ಬೆಳಗಾವಿ:
ನಿಯಮಗಳಿಗೆ ವಿರುದ್ಧ ನಡವಳಿಕೆ ತೋರಿದ ಆರೋಪದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ 15 ಮಂದಿ ಕಾಂಗ್ರೆಸ್ ಸದಸ್ಯರನ್ನು ದಿನದ ಮಟ್ಟಿಗೆ ಬುಧವಾರ ಅಮಾನತುಗೊಳಿಸಲಾಗಿದೆ.
ಎಸ್.ಆರ್.ಪಾಟೀಲ್, ಎಂ.ನಾರಾಯಣ ಸ್ವಾಮಿ, ಬಿ.ಕೆ.ಹರಿಪ್ರಸಾದ್, ಪ್ರತಾಪ್‌ಚಂದ್ರ ಶೆಟ್ಟಿ, ಸಿ.ಎಂ.ಇಬ್ರಾಹಿಂ, ನಜೀರ್ ಅಹ್ಮದ್, ಆರ್.ಬಿ.ತಿಮ್ಮಾಪುರ, ಬಸವರಾಜ್ ಪಾಟೀಲ್ ಇಟಗಿ, ಅರವಿಂದ ಕುಮಾರ್ ಅರಳಿ, ಯು.ಬಿ.ವೆಂಕಟೇಶ್, ಎಂ.ಎ.ಗೋಪಾಲಸ್ವಾಮಿ, ಸಿ.ಎಂ.ಲಿಂಗಪ್ಪ, ವೀಣಾ ಅಚ್ಚಯ್ಯ, ಪಿ.ಆರ್.ರಮೇಶ್ ಹಾಗೂ ಹರೀಶ್ ಕುಮಾರ್ ಅಮಾನತಾದ ಪರಿಷತ್ ಸದಸ್ಯರಾಗಿದ್ದಾರೆ.
Also Read: 15 Cong MLCs including LoP suspended for a day from Karnataka Legislative Council
ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿ ಪ್ರತಿಪಕ್ಷ ನಾಯಕರು ಚರ್ಚೆಗೆ ಆಗ್ರಹಿಸಿದರು. ಆದರೆ, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಿರಾಕರಿಸಿದರು. ಹೀಗಾಗಿ ಭೈರತಿ ವಿರುದ್ಧದ ಚರ್ಚೆ ಕೊನೆಗೊಳಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.
ಆದರೆ, ಪಟ್ಟುಬಿಡದ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಆಗ್ರಹಿಸಿ ಧರಣಿ ನಡೆಸಿದರು. ಹೀಗಾಗಿ ಸದನದ ನಿಯಮಗಳಿಗೆ ವಿರುದ್ಧ ನಡವಳಿಕೆ ತೋರಿದ ಆರೋಪದಲ್ಲಿ ಅವರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಲಾಯಿತು. ಬಳಿಕ ಕಲಾಪವನ್ನು ಮೂಂದೂಡಲಾಯಿತು.