ಬೆಳಗಾವಿ: ಬೆಳಗಾವಿ ಜಿಲ್ಲೆಯ ಸೌದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಳಿಗಟ್ಟಿ ಕ್ರಾಸ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಚಾಕು ಇರಿತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಮೃತರನ್ನು ಬಸವರಾಜ ಪರಪ್ಪ (49) ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ ಈರಯ್ಯ ಸಂಗಯ್ಯ ಮಠಪತಿ (32) ಎಂಬಾತ ಪ್ರಮುಖ ಆರೋಪಿ ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಈ ಕೊಲೆಗೆ ಸುಮಾರು 15 ವರ್ಷಗಳ ಹಿಂದಿನ ವೈಯಕ್ತಿಕ ಮತ್ತು ಕುಟುಂಬ ಸಂಬಂಧಿತ ವೈಷಮ್ಯವೇ ಕಾರಣ ಎನ್ನಲಾಗಿದೆ. ಆಗಿನ ಘಟನೆಗಳ ಹಿನ್ನೆಲೆಯಲ್ಲಿ ಇಬ್ಬರ ನಡುವೆ ದೀರ್ಘಕಾಲದ ದ್ವೇಷ ಮುಂದುವರಿದಿತ್ತು ಎಂದು ಎಸ್ಪಿ ವಿವರಿಸಿದ್ದಾರೆ.
ಇತ್ತೀಚೆಗೆ ಮೃತ ಬಸವರಾಜ ಅವರು ತಮ್ಮ ಊರಲ್ಲಿ ಮನೆ ಕಟ್ಟಲು ಆಗಮಿಸಿದ್ದ ವೇಳೆ, ಈ ವಿಷಯವನ್ನು ನೆಪ ಮಾಡಿಕೊಂಡು ಪುನಃ ವಿವಾದಗಳು ನಡೆದಿವೆ. ಫೆಬ್ರವರಿ 2ರಂದು ಬಿಸಿರೋಣಿ ಗ್ರಾಮದಿಂದ ಹುಳಿಗಟ್ಟಿ ಕಡೆ ಬರುತ್ತಿದ್ದ ಬಸವರಾಜರನ್ನು ಆರೋಪಿ ಹಿಂಬಾಲಿಸಿ, ಹುಳಿಗಟ್ಟಿ ಕ್ರಾಸ್ ಬಳಿ ಚಾಕುವಿನಿಂದ ತಲೆ, ಭುಜ, ಬೆನ್ನು ಹಾಗೂ ಹೊಟ್ಟೆ ಭಾಗಗಳಿಗೆ ಗಂಭೀರ ಗಾಯಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೇಳೆ ಇಬ್ಬರ ನಡುವೆ ಹೋರಾಟ ನಡೆದಿದ್ದು, ಇದರಿಂದ ಆರೋಪಿ ಈರಯ್ಯನಿಗೂ ಡಿಫೆನ್ಸಿವ್ ಇಂಜುರಿಗಳು (ತಡೆಗಟ್ಟುವ ವೇಳೆ ಉಂಟಾದ ಗಾಯಗಳು) ಆಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಸವರಾಜರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಆರೋಪಿ ಈರಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯ ಆರೋಗ್ಯ ಸ್ಥಿತಿ ಸ್ಥಿರಗೊಂಡ ಬಳಿಕ ಅಧಿಕೃತ ಬಂಧನ ನಡೆಸಲಾಗುವುದು ಎಂದು ಎಸ್ಪಿ ಹೇಳಿದ್ದಾರೆ. ಘಟನೆಯಲ್ಲಿ ಬಳಸಿದ ದೊಡ್ಡ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಪೂರ್ವನಿಯೋಜಿತವಾಗಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಏಕೈಕ ಆರೋಪಿ ಭಾಗವಹಿಸಿದ್ದಾನೆ ಎಂಬುದು ಪ್ರಾಥಮಿಕವಾಗಿ ದೃಢಪಟ್ಟಿದ್ದು, ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಸಾಕ್ಷ್ಯಾಧಾರಗಳ ಪರಿಶೀಲನೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
