ಕೊಣಾಜೆ: ಗ್ರಾಮೀಣ ಶಾಲೆಗಳ ಮಕ್ಕಳಲ್ಲಿ ಉಳಿತಾಯ ಪ್ರಜ್ಞೆ ಮೂಡಿಸುವ ಸಲುವಾಗಿ ಭಾರತೀಯ ಅಂಚೆ ಮಂಗಳೂರು ವಿಭಾಗ, ಶಾರದಾ ಗಣಪತಿ ವಿದ್ಯಾಕೇಂದ್ರ ಶಾಲಾ ಸಂಚಾಲಕರಾದ ಟಿ.ಜಿ.ರಾಜಾರಾಮ ಭಟ್ ಇವರ ಪ್ರಾಯೋಜಕತ್ವ ದಲ್ಲಿ ಶಾಲೆಯಲ್ಲಿ ಕಲಿಯುತ್ತಿರುವ ಒಟ್ಟು 17 ಜೋಡಿ ಅವಳಿ ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಮಹಿಳಾ ಸಮ್ಮಾನ ಪ್ರಮಾಣ ಪತ್ರ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳನ್ನು ಶಾಲೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತೆರೆಯಲಾಯಿತು.
ಒಂದೇ ಶಾಲೆಯ 17 ಜೋಡಿ ಅವಳಿ ಮಕ್ಕಳಿಗೆ (ಒಟ್ಟು 34) ಅಂಚೆ ಉಳಿತಾಯ ಖಾತೆಗಳನ್ನು ಏಕ ಕಾಲಕ್ಕೆ ತೆರೆಯುವ ಮೂಲಕ ಮಂಗಳೂರು ಅಂಚೆ ವಿಭಾಗ ಮತ್ತೊಂದು ವೈಶಿಷ್ಟ್ಯ ಪೂರ್ಣ ದಾಖಲೆಯನ್ನು ಬರೆದಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಟಿ. ಜಿ.ರಾಜಾರಾಮ ಭಟ್ ರವರು ವಹಿಸಿದ್ದರು. ಹಿರಿಯ ಅಂಚೆ ಅಧೀಕ್ಷಕರಾದ ಎಂ.ಸುಧಾಕರ ಮಲ್ಯ, ಉಪ ಅಂಚೆ ಅಧೀಕ್ಷಕರಾದ ಪಿ.ದಿನೇಶ್, ಅಂಚೆ ನಿರೀಕ್ಷಕರಾದ ಸುರೇಶ್, ತಾಲ್ಲೂಕು ಪಂ. ಸದಸ್ಯ ನವೀನ್, ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಜಯರಾಂ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಹರಿ, ಅಂಚೆ ಇಲಾಖೆಯ ಸುಭಾಷ್ ಸಾಲಿಯಾನ್, ರೋಹನ್ ಲೂಯಿಸ್ ಉಪಸ್ಥಿತರಿದ್ದರು. ಅಂಚೆ ಇಲಾಖೆಯ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರ್ವಹಿಸಿದರು. ಸೇರಾಜೆ ಶ್ರೀನಿವಾಸ್ ಭಟ್ ಸ್ವಾಗತಿಸಿ, ಚಂದ್ರಕುಮಾರ್ ವಂದಿಸಿದರು.
ಮಂಗಳೂರು ಅಂಚೆ ವಿಭಾಗದ ಕೈರಂಗಳ ಬ್ರಾಂಚ್ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರ ಎಂಬ ಶಾಲೆಯೊಂದು ಕಳೆದ 18 ವರ್ಷಗಳಿಂದ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾ ಚರಿಸುತ್ತಿರುವ ಈ ಶಾಲೆಯಲ್ಲಿ ಸುಮಾರು 913 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯ ವೈಶಿಷ್ಟ್ಯವೆಂದರೆ ಈ ಶಾಲೆಯಲ್ಲಿ ಒಟ್ಟು 17 ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.