ಮೈಸೂರು/ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ₹17,000 ಕೋಟಿ ಅನುದಾನವನ್ನು ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ, ಕೇಂದ್ರದ ಜಿಎಸ್ಟಿ ಸರಳೀಕರಣ ಕ್ರಮದಿಂದ ರಾಜ್ಯಕ್ಕೆ ವಾರ್ಷಿಕವಾಗಿ ₹15,000 ಕೋಟಿ ನಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “2017ರಲ್ಲಿ ಜಿಎಸ್ಟಿ ಜಾರಿಗೆ ತಂದು ದರವನ್ನು ಕೇಂದ್ರವೇ ನಿಗದಿ ಮಾಡಿತ್ತು. ಎಂಟು ವರ್ಷಗಳಿಂದ ಜನರಿಂದ ಹೆಚ್ಚು ಹಣವನ್ನು ವಸೂಲಿ ಮಾಡಿದೆ. ಈಗ ಚುನಾವಣಾ ಲಾಭಕ್ಕಾಗಿ ಕಡಿತಗೊಳಿಸಿ ತಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಹೀಗಿದ್ದರೆ ಜನರಿಂದ ಹೆಚ್ಚು ಪಡೆದ ಹಣವನ್ನು ಮರಳಿ ಕೊಡುತ್ತೀರಾ?” ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅನ್ಯಾಯವಾದ ಕೇಂದ್ರದ ಹಂಚಿಕೆ:
- ಕರ್ನಾಟಕವು ₹4.5 ಲಕ್ಷ ಕೋಟಿ ತೆರಿಗೆ ಸಂಗ್ರಹ ಕೇಂದ್ರಕ್ಕೆ ನೀಡಿದರೆ, ಪ್ರತಿ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ರಾಜ್ಯಕ್ಕೆ ಬರುತ್ತದೆ.
- ಉತ್ತರಪ್ರದೇಶಕ್ಕೆ 18% ಹಂಚಿಕೆ ಸಿಗುತ್ತಿದ್ರೆ, ಕರ್ನಾಟಕಕ್ಕೆ ಕೇವಲ 3.5% ಮಾತ್ರ.
- 15ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ₹5,490 ಕೋಟಿ ವಿಶೇಷ ಅನುದಾನ, ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ, ರಸ್ತೆ ಕಾಮಗಾರಿಗೆ ₹3,000 ಕೋಟಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ₹5,000 ಕೋಟಿ ಸೇರಿ ಒಟ್ಟು ₹17,000 ಕೋಟಿ ಬಿಡುಗಡೆ ಆಗಿಲ್ಲ.
“ಈ ಬಾರಿಯೂ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಿ ರಾಜ್ಯದ ಹಕ್ಕಿನ ಹಣವನ್ನು ಪಡೆದು ತರುತ್ತೇವೆ,” ಎಂದು ಸಿಎಂ ಘೋಷಿಸಿದರು.
ಬಿಜೆಪಿ ಸಂಸದರಿಗೆ ಟೀಕೆ:
“ಕೇಂದ್ರದ ಬೆಂಬಲಿತ ರಾಜ್ಯಗಳಿಗೆ ಮಾತ್ರ ಜಿಎಸ್ಟಿ ಪರಿಹಾರ ನೀಡಲಾಗುತ್ತಿದೆ. ನಮ್ಮ ರಾಜ್ಯದ ಬಿಜೆಪಿ ಸಂಸದರಿಗೆ ಜನರ ಹಿತ ಮುಖ್ಯವಲ್ಲ, ಮೋದಿಯವರನ್ನು ಹೊಗಳುವುದೇ ಅವರ ಕೆಲಸವಾಗಿದೆ,” ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಜಾತಿ ಸಮೀಕ್ಷೆ ಪ್ರಗತಿ:
ರಾಜ್ಯದಲ್ಲಿ 80 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಅ.7ರೊಳಗೆ ಜಾತಿ ಸಮೀಕ್ಷೆ ಮುಗಿಯಲಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಗಳನ್ನು ತಳ್ಳಿಹಾಕಿದ ಸಿಎಂ, “ನಾವು ಸಾಮಾಜಿಕ-ಆರ್ಥಿಕ ಉದ್ದೇಶಕ್ಕಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ಜನರನ್ನ ವಿಭಜಿಸುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ವಿಪಕ್ಷದ ಆರೋಪಕ್ಕೆ ತಿರುಗೇಟು:
ವಿಪಕ್ಷ ನಾಯಕ ಆರ್. ಅಶೋಕ್ ಅವರ “ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಸರ್ಕಾರ ಸತ್ತಂತೆಯೇ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಅವರು ಆರ್ಎಸ್ಎಸ್ನ ಸೂಚನೆಯಂತೆ ಮಾತನಾಡುತ್ತಾರೆ. ಇದು ಕೇವಲ ರಾಜಕೀಯ ಆರೋಪ ಮಾತ್ರ” ಎಂದರು.
