ಬೆಂಗಳೂರು: ಮೇ 7ರಂದು ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿನ 85 ವರ್ಷ ಮೇಲ್ಪಟ್ಟ 19,631 ಮಂದಿ ಮತದಾರರು ಈವರೆಗೆ ತಮ್ಮ ಮನೆಗಳಿಂದ ಮತ ಚಲಾಯಿಸಿದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕಚೇರಿ ಪ್ರಕಟಣೆ ತಿಳಿಸಿದೆ.
ಮನೆಯಿಂದ ಮತದಾನ ಮಾಡಲು ಒಟ್ಟು 23,213 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಅದೇ ರೀತಿ, ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗ ಇರುವ 10,897 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದರು. 9,451 ದಿವ್ಯಾಂಗ ಇರುವ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಮನೆಯಿಂದ ಮತದಾನ ಮಾಡಿದ ವಿಶೇಷ ಚೇತನರು ಮತ್ತು 85 ರ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಧಿಕಾರಿಗಳಿಂದ ಅಭಿನಂದನೆಗಳು. ಪ್ರತಿ ಮತವೂ ಅಮೂಲ್ಯ. ಇವರ ಈ ನಡೆ ಸಾಮಾನ್ಯ ಮತದಾರರಿಗೆ ಮಾದರಿಯಾಗಿದೆ.#ceokarnataka #LokaSabhaElection2024#DeshkaGarv #voteindia #dharwad #saksham #karnataka pic.twitter.com/SXkVYlRmcr
— Chief Electoral Officer, Karnataka (@ceo_karnataka) April 25, 2024
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2,207 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 3,187 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 5,059 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 180 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 29,850 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,961 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆಯವರು 1.99 ಕೋಟಿ ರೂ.ನಗದು ಹಣವನ್ನು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.