ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಜಿ ಆಹ್ವಾನವಿಲ್ಲದೆ ಆಯ್ಕೆ — 12 ಮಹಿಳೆಯರು ಮತ್ತು ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭಾವಂತರಿಗೆ ಪ್ರಶಸ್ತಿ.
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025ರ ಪಟ್ಟಿ ಘೋಷಣೆಯಾಗಿದೆ. ಚಿತ್ರ ನಟ ಪ್ರಕಾಶ್ ರಾಜ್ ಸೇರಿದಂತೆ 70 ಮಂದಿ ವಿವಿಧ ಕ್ಷೇತ್ರಗಳ ಗಣ್ಯರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಬಾರಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ವಿಶಿಷ್ಟವಾಗಿದೆ — ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನವಿಲ್ಲದೆ ಆಯ್ಕೆ ಪ್ರಕ್ರಿಯೆ ನಡೆದಿದೆ.
ಜಿಲ್ಲಾವಾರು ಶಿಫಾರಸುಗಳು, ಸಾಮಾಜಿಕ ಪರಿಪಾಲನೆ ಹಾಗೂ ಆಯ್ಕೆ ಸಮಿತಿ ಸಲಹೆಗಳ ಆಧಾರದ ಮೇಲೆ ಈ ಪಟ್ಟಿ ಅಂತಿಮಗೊಂಡಿದೆ.
ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ:
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಸಚಿವ ಶಿವರಾಜ್ ತಂಗಡಗಿ ಅವರು, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಸದಸ್ಯರ ಶಿಫಾರಸುಗಳನ್ನು ಬಹುತೇಕ ಸ್ವೀಕರಿಸಲಾಗಿದೆ ಎಂದು ಹೇಳಿದರು.
“ನಾಲ್ಕು-ಐದು ಬಾರಿ ಸಭೆ ನಡೆಸಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಸಮಿತಿ ಸದಸ್ಯರ ಸಹಕಾರಕ್ಕೆ ಧನ್ಯವಾದಗಳು,” ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೊತೆಗೆ 12 ಮಹಿಳೆಯರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯಾವುದೇ ಸಂಘಟನೆಗಳಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಮುಖ ಪ್ರಶಸ್ತಿ ಪಡಿದವರು:
- ಚಿತ್ರರಂಗ: ಪ್ರಕಾಶ್ ರಾಜ್ (ದಕ್ಷಿಣ ಕನ್ನಡ), ಮತಿ ವಿಜಯಲಕ್ಷ್ಮೀ ಸಿಂಗ್ (ಕೊಡಗು)
- ಆಡಳಿತ/ವೈದ್ಯಕೀಯ: ಹೆಚ್. ಸಿದ್ದಯ್ಯ (ಭಾ.ಆ.ಸೇ ನಿವೃತ್ತ), ಡಾ. ಆಲಮ್ಮ ಮಾರಣ್ಣ (ತುಮಕೂರು), ಡಾ. ಜಯರಂಗನಾಥ್ (ಬಿ.ಗ್ರಾ)
- ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ (ಶಿವಮೊಗ್ಗ), ರಹಮತ್ ತರೀಕೆರೆ (ಚಿಕ್ಕಮಗಳೂರು), ಪ್ರೊ. ಸುನಂದಮ್ಮ (ಚಿಕ್ಕಬಳ್ಳಾಪುರ)
- ಜನಪದ: ಬಸಪ್ಪ ಚೌಡ್ಕಿ (ಕೊಪ್ಪಳ), ಸಿಂಧು ಗುಜರನ್ (ದಕ್ಷಿಣ ಕನ್ನಡ), ಎಲ್. ಮಹದೇವಪ್ಪ (ಮೈಸೂರು)
- ಸಮಾಜಸೇವೆ: ಸೂಲಗಿತ್ತಿ ಈರಮ್ಮ (ವಿಜಯನಗರ), ಡಾ. ಸೀತಾರಾಮ ಶೆಟ್ಟಿ (ಉಡುಪಿ), ಕೋರಿನ್ ಆಂಟೊನಿಯಟ್ (ದ.ಕ)
- ಸಂಗೀತ ಮತ್ತು ನೃತ್ಯ: ದೇವೇಂದ್ರ ಕುಮಾರ್ ಪತ್ತಾರ್ (ಕೊಪ್ಪಳ), ಪ್ರೊ. ಕೆ. ರಾಮಮೂರ್ತಿ ರಾವ್ (ಮೈಸೂರು)
- ಕೃಷಿ: ಡಾ. ಹಿತ್ತಲಮನಿ (ಹಾವೇರಿ), ಎಂ.ಸಿ. ರಂಗಸ್ವಾಮಿ (ಹಾಸನ)
- ಮಾಧ್ಯಮ: ಕೆ.ಸುಬ್ರಮಣ್ಯ (ಬೆಂಗಳೂರು), ಎಂ. ಸಿದ್ಧರಾಜು (ಮಂಡ್ಯ), ಬಿ.ಎಂ. ಹನೀಫ್ (ದ.ಕ)
- ಶಿಕ್ಷಣ: ಡಾ. ಎಂ.ಆರ್. ಜಯರಾಮ್ (ಬೆಂಗಳೂರು), ಡಾ. ಎನ್.ಎಸ್. ರಮೇಗೌಡ (ಮೈಸೂರು)
- ಕ್ರೀಡೆ: ಆಶೀಷ್ ಕುಮಾರ್ ಬಲ್ಲಾಳ್ (ಬೆಂಗಳೂರು), ಡಾ. ಬಬಿನಾ ಎನ್.ಎಂ (ಯೋಗ, ಕೊಡಗು)
- ಯಕ್ಷಗಾನ ಮತ್ತು ರಂಗಭೂಮಿ: ಕೆ.ಪಿ. ಹೆಗಡೆ (ಉತ್ತರ ಕನ್ನಡ), ಮೈಮ್ ರಮೇಶ್ (ದ.ಕ), ಗುಂಡೂರಾಜ್ (ಹಾಸನ)
ಈ ಪೈಕಿ ಕೆಲವರು ವಿದೇಶಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಕನ್ನಡ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿರುವವರು ಕೂಡ ಪ್ರಶಸ್ತಿ ಪಟ್ಟಿ ಸೇರಿದ್ದಾರೆ.
