Home Uncategorized 263 ಹೊಸ ಬಸ್ಸುಗಳ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ

263 ಹೊಸ ಬಸ್ಸುಗಳ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ

8
0

ಬೆಂಗಳೂರು : ರಾಜ್ಯ ಸರಕಾರವು 2023-24ನೆ ಸಾಲಿಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 263 ಹೊಸ ಬಸ್ಸುಗಳನ್ನು 167.70 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 100 ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್‍ಗಳು, 20 ಹವಾ ನಿಯಂತ್ರಿತ ಮಲ್ಟಿ ಆಕ್ಸೆಲ್ ಸೀಟರ್ ಬಸ್ ಗಳು ಹಾಗೂ 20 ಹವಾ ನಿಯಂತ್ರಿತ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್‍ಗಳನ್ನು 119 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 123 ಹವಾನಿಯಂತ್ರಣ ರಹಿತ ನಗರ ಸಾರಿಗೆ ಬಸ್‍ಗಳನ್ನು 48.70 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.

ಇತರೆ ನಿರ್ಣಯಗಳು: ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 3ನೆ ಮತ್ತು 4ನೆ ಅಂತಸ್ತಿನ ಕಟ್ಟಡ ಕಾಮಗಾರಿ ಮತ್ತು ವಿದ್ಯಾರ್ಥಿನಿಲಯದ 3ನೇ ಅಂತಸ್ತಿನ ಕಟ್ಟಡ ಕಾಮಗಾರಿಗಳ 49 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಹಾಗೂ ಪ್ರಸನ್ನ ಕುಮಾರ್ ಬ್ಲಾಕ್ ಆವರಣದಲ್ಲಿ ಒಟ್ಟು 43 ಎಕರೆ ಜಮೀನಿನಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಕಟ್ಟಡ, ಕ್ರೀಡಾ ಕಟ್ಟಡ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ 168.63 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ತೋಟಗಾರಿಕಾ ತರಬೇತಿ ಕೇಂದ್ರಗಳು ಮತ್ತು ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಸ್ನಾತಕೋತ್ತರ ವಸತಿ ನಿಲಯಗಳ ನಿರ್ಮಾಣ ಕಾಮಗಾರಿಗಳನ್ನು ನಬಾರ್ಡ್ ಆರ್ ಐಡಿಎಫ್ ಸಾಲದ ನೆರವಿನೊಂದಿಗೆ 35.14 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದೊಂದಿಗೆ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ ಮತ್ತು ಪ್ಲೇ ಸೌಲಭ್ಯವನ್ನು 30 ಕೋಟಿ ರೂ.ಗಳ ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಎಫ್‍ಎಸ್‍ಐಡಿ ಸಹಯೋಗದೊಂದಿಗೆ ವಿನ್ಯಾಸ ಉತ್ಕೃಷ್ಟತಾ ಕೇಂದ್ರವನ್ನು 19.90 ಕೋಟಿ ರೂ.ಗಳ ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

ಸ್ಟಾರ್ಟ್ ಅಪ್‍ಗಳಿಗೆ ಇನ್ನೋವರ್ಸ್-ಪರಿಪೋಷಣಾ ಕೇಂದ್ರವನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಅನುಮೋದನೆ. ಕಿಯೋನಿಕ್ಸ್ ಸಂಸ್ಥೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ರಾಜ್ಯ ಸರಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳಿಗೆ ಒದಗಿಸಿರುವ ನಾನ್-ಐಟಿ ಮಾನವ ಸಂಪನ್ಮೂಲ ಸೇವೆಗಳಿಗೆ ಬಾಕಿ ವೇತನವನ್ನು 2023ರ ಅ.31ರ ತನಕ ಹಾಗೂ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್‍ಟೆನ್ಸಿ ಸೇವೆಗಳಿಗೆ ಸಂಬಂಧಿಸಿದ ವೇತನ ಪಾವತಿಗಳಿಗೆ ಅನುಮೋದನೆ.

ಕೇಂದ್ರ ಸರಕಾರವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ ಆಧುನೀಕರಣ ಕಾರ್ಯಕ್ರಮ ಯೋಜನೆಯಡಿ ಬಿಡುಗಡೆ ಮಾಡಿರುವ ಅನುದಾನದಲ್ಲಿ ಪ್ರತಿ ತಾಲೂಕಿಗೆ 10 ಲಕ್ಷ ರೂ.ಗಳಂತೆ ಒಟ್ಟು 240 ತಾಲೂಕುಗಳಿಗೆ ಅಂದಾಜು 24 ಕೋಟಿ ರೂ.ಗಳ ವೆಚ್ಚದಲ್ಲಿ ಕಂದಾಯ ಇಲಾಖೆಯ ಕಚೇರಿಗಳಿಗೆ ಒದಗಿಸಲು ಕಾಂಪ್ಯಾಕ್ಟರ್‍ಗಳನ್ನು ಖರೀದಿಸಲು ಅನುಮೋದನೆ.

ಕೃಷಿ ಭಾಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಕೃಷಿ ಇಲಾಖೆಗೆ 100 ಕೋಟಿ ರೂ.ಗಳನ್ನು ಹಾಗೂ ಕೆರೆಗಳ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಗೆ 100 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಜಲ ಜೀವನ್ ಮಿಷನ್ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕುಮ್ಸಿ, ಗಾಜನೂರು ಮತ್ತು ಇತರೆ 88 ಗ್ರಾಮಗಳಲ್ಲಿನ 102 ಜನವಸತಿಗಳನ್ನು ಒಳಗೊಂಡಂತೆ 125 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್ ವರ್ಕ್ ರಡಿಯಲ್ಲಿ ವೃತ್ತಿ ಕೌಶಲ್ಯಗಳನ್ನು ಶಾಲೆಗಳಲ್ಲಿ ಬೋಧಿಸಲು ಅವಶ್ಯಕವಿರುವ 613 ವೃತ್ತಿ ಶಿಕ್ಷಣ ತರಬೇತುದಾರರನ್ನು 17.06 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here