ನವದೆಹಲಿ, ಮಾರ್ಚ್ 27: ಬಯಲುಸೀಮೆ ಜಿಲ್ಲೆಗಳ ನೀರಿನ ಸಮಸ್ಯೆ ಕುರಿತು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಸಂಸದ ಡಾ. ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಮತ್ತು ಎಚ್ಎನ್ ವ್ಯಾಲಿ ಯೋಜನೆಗಳಡಿ ಮೂರು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
2007ರಿಂದಲೂ ಈ ಭಾಗಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರನೇ ಹಂತದ ಸಂಸ್ಕರಣೆಯ ಮೂಲಕ ನೀರು ಪೂರೈಕೆ ಮಾಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೆಲವು ಸಂಸ್ಥೆಗಳು ವರದಿ ನೀಡಿರುವುದಾಗಿ ಹೇಳಿದರು. ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ತಿಳಿಸುತ್ತಿರುವುದರಿಂದ, ಈ ನಿಯಮವನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿದ ಅವರು, ಶಾಶ್ವತ ನೀರಾವರಿಗಾಗಿ ಕೃಷ್ಣ ನದಿಯಿಂದ ಕನಿಷ್ಠ 15 ಟಿಎಂಸಿ ನೀರನ್ನು ಬಯಲುಸೀಮೆ ಜಿಲ್ಲೆಗಳಿಗೆ ಪೂರೈಸಲು ಕ್ರಮ ವಹಿಸಬೇಕು ಎಂದು ಹೇಳಿದರು.
