ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿಗೆ ಮಿನಿ ಬಸ್‍ನಲ್ಲಿ ಪ್ರವಾಸಕ್ಕೆ ಬಂದಿದ್ದ ಬಸ್ ವೊಂದು ಪಲ್ಟಿಯಾಗಿ ಬಾಲಕನೋರ್ವ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಬಾ ಬುಡನ್‍ಗಿರಿ ಸಮೀಪದ ಮಾಣಿಕ್ಯಧಾರ ಎಂಬಲ್ಲಿ ರವಿವಾರ ನಡೆದಿದೆ. ಬಸ್ ಪಲ್ಟಿ ಹೊಡೆದು ರಸ್ತೆಯ ಮೇಲ್ಮೈಯಿಂದ ಸುಮಾರು 100 ಅಡಿ ಕೆಳಗೆ ಇಳಿಯಿತು.
ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಆದಿವಾಲ ಗ್ರಾಮದವರು ಎಂದು ತಿಳಿದು ಬಂದಿದ್ದು, ಗಾಯಗೊಂಡವರಲ್ಲಿ ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಆದಿವಾಲ ಗ್ರಾಮದವರಾದ ಒಂದೇ ಕುಟುಂಬದ 30ಕ್ಕೂ ಹೆಚ್ಚು ಮಂದಿ ಮಿನಿ ಬಸ್ ಮೂಲಕ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‍ಗಿರಿ ಪ್ರವಾಸಕ್ಕೆ ರವಿವಾರ ಬಂದಿದ್ದರು. ಈ ಪ್ರವಾಸಿಗರು ಬಾಬಾ ಬುಡನ್‍ಗಿರಿ ಮಾರ್ಗದಲ್ಲಿರುವ ಮಾಣಿಕ್ಯಧಾರ ಪ್ರವಾಸ ಮುಗಿಸಿಕೊಂಡು ಬಾಬಾ ಬುಡನ್‍ಗಿರಿಗೆ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಸಣ್ಣ ಕಂದಕ್ಕೆ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು, ಪೊಲೀಸರು ಹಾಗೂ ಪ್ರವಾಸಕ್ಕೆ ಬಂದಿದ್ದವರು ಬಸ್‍ನಿಂದ ಹೊರ ತೆಗೆದಿದ್ದಾರೆ. ನಂತರ ಹಲವು ಆಂಬುಲೆನ್ಸ್ ಗಳ ಮೂಲಕ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಾಂಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.