
Congress Party's victory is cause of BJP's fear - Chief Minister Siddaramaiah
ಬೆಂಗಳೂರು:
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ 40 ಪರ್ಸೆಂಟ್ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ಮೂಲಕ ಪ್ರತಿಪಕ್ಷ ಬಿಜೆಪಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ.
ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ ಕಮಿಷನ್ ಆರೋಪದ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಗುರುವಾರ ಆದೇಶ ಹೊರಡಿಸಿದೆ.
ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಒಂದು ತಿಂಗಳಲ್ಲಿ ನೀಡಬೇಕು. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಕಡತ, ದಾಖಲೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಈ ತನಿಖಾ ಸಮಿತಿಗೆ ನೀಡಬೇಕೆಂದು ಆದೇಶದಲ್ಲಿ ಸೂಚಿಸಿದೆ.
ರಾಜ್ಯ ಗುತ್ತಿಗೆದಾರರ ಸಂಘವು, ಎಲ್ಲ ಸಾರ್ವಜನಿಕ ಯೋಜನೆಗಳಲ್ಲಿ ಶೇ. 40ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂಗೆ ಪತ್ರ ಬರೆದಿತ್ತು.
ಕಾಮಗಾರಿ ಆರಂಭಕ್ಕೂ ಮುನ್ನವೇ ಜನ ಪ್ರತಿನಿಧಿಗಳಿಗೆ ಶೇ.25ರಿಂದ 30ರಷ್ಟು ಕಮಿಷನ್ ನೀಡಿದರೆ, ಉಳಿದ ಹಣವನ್ನು ಕಾಮಗಾರಿ ಮುಗಿದ ನಂತರ ಪಾವತಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಆದಾಗ್ಯೂ, ಈ ಗಂಭೀರ ಆರೋಪಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ನಿಯಮಗಳು ಮತ್ತು ಕಾಮಗಾರಿಗಳ ಗುಣಮಟ್ಟದ ಪ್ರಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಯೇ ಎಂದು ಆಯೋಗವು ತನಿಖೆ ನಡೆಸಲಿದೆ.