ಬೆಂಗಳೂರು:
ಹಿಂದಿನ ಬಿಜೆಪಿ ಸರಕಾರದಲ್ಲಿ ಕೋವಿಡ್ ನಲ್ಲಿ 40,000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಆರೋಪದಿಂದ ಕಾಂಗ್ರೆಸ್ ರಕ್ಷಣೆ ಪಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾಂಗ್ರೆಸ್ ಗೆ ಹೊಸ ಅಸ್ತ್ರವಾಗಿಬಿಟ್ಟಿದೆ. ಪರಮೇಶ್ವರ್, ಎಂ.ಬಿ.ಪಾಟೀಲ್ ಅವರು ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಇಷ್ಟು ದೊಡ್ಡ ಅಕ್ರಮ ನಡೆದಿದೆ ಎಂದರೆ ನಂಬಲಾಗುತ್ತಿಲ್ಲ ಎಂದರು ಅವರು.
ಹಿಂದೆ ಫ್ರೀಡಂ ಪಾರ್ಕ್ ನಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ್ ಭಾಷಣ ಮಾಡಿದ್ದರು. ಗಾಂಧಿ ಕುಟುಂಬ ಹೆಸರು ಹೇಳಿಕೊಂಡು ಮೂರು ತಲೆಮಾರಿಗೆ ಅಗುವಷ್ಟು ಮಾಡಿಕೊಂಡಿದ್ದೇವೆ. ಆ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಅಂತ ಹೇಳಿದ್ದರು. ಕೋವಿಡ್ ಕಾಲದಲ್ಲಿ ಎಷ್ಟು ಹಣ ಬಿಡುಗಡೆ ಆಗಿದೆ ಎಂದು ಲೆಕ್ಕ ತೆಗೆದರೆ ಎಲ್ಲವೂ ಗೊತ್ತಾಗಿಬಿಡುತ್ತದೆ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್ ಉಪಸ್ಥಿರಿದ್ದರು.