Home ಕರ್ನಾಟಕ 5, 8, 9 ಮತ್ತು 11ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ

5, 8, 9 ಮತ್ತು 11ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ

35
0

ಬೆಂಗಳೂರು: ರಾಜ್ಯಪಠ್ಯ ಕ್ರಮವಿರುವ ಶಾಲೆಗಳ 5,8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಸರಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.

ರಾಜ್ಯ ಸರಕಾರದ ಸುತ್ತೋಲೆಯನ್ನು ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸರಕಾರದ ಮನವಿ ಮೇರೆಗೆ ಮೇಲ್ಮನವಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ‌. ಇದರಿಂದ ಸೋಮವಾರದಿಂದ ಆರಂಭ ಆಗುವ ಬೋರ್ಡ್ ಪರೀಕ್ಷೆ ನಡೆಯಲಿದೆ.

ವಿಚಾರಣೆ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ಸೋಮವಾರದಿಂದ ಬೋರ್ಡ್ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಈ ಹಂತದಲ್ಲಿ ಸರಕಾರ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ಹೊರಡಿಸಿದ ಆದೇಶವನ್ನು ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿದೆ.‌ ಇದು ಪರೀಕ್ಷೆ ನಡೆಸುವ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ವಕೀಲರು ಮನವಿ‌ ಮಾಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖಾಸಗಿ ಶಾಲೆಗಳ ಪರ ವಕೀಲರು, ಪರೀಕ್ಷೆ ನಡೆಸುವ ವಿಚಾರದಲ್ಲಿ ಕರ್ನಾಟಕದ ಶಿಕ್ಷಣ ಕಾಯ್ದೆಯಲ್ಲಿ ಹೇಳಿರುವ ನಿಯಮಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ಸರಕಾರದ ಸುತ್ತೋಲೆಯನ್ನು ಏಕಸದಸ್ಯ ಪೀಠ ರದ್ದುಪಡಿಸಿದೆ. ಕಳೆದ ವರ್ಷವೂ ವಿಭಾಗೀಯ ಪೀಠದಿಂದ ಆದೇಶ ಪಡೆದು ಸರಕಾರ ಬೋರ್ಡ್ ಪರೀಕ್ಷೆ ನಡೆಸಿತ್ತು. ಈ ವರ್ಷವೂ ಸರಕಾರ ಅದೇ ಹಾದಿಯಲ್ಲಿ ನಡೆಯುತ್ತಿದೆ. ಬೋರ್ಡ್ ಪರೀಕ್ಷೆ ನಡೆಸಲು ಅಗತ್ಯ ನಿಯಮ ರೂಪಿಸಬೇಕಿದೆ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠ ಆದೇಶಕ್ಕೆ ತಡೆ ನೀಡಬಾರದು ಎಂದು ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಪರ ವಕೀಲರು ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿ ಹೈಕೋರ್ಟ್ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದೆ.

LEAVE A REPLY

Please enter your comment!
Please enter your name here