
ಬೆಂಗಳೂರು: ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಬೃಹತ್ ದಾಳಿ ನಡೆಸಿದ ಬೆಂಗಳೂರು ಸೋಲ್ಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ (BSWML) ಅಧಿಕಾರಿಗಳು, ಚಾಮರಾಜಪೇಟೆಯ ಟಿಪ್ಪುನಗರದಲ್ಲಿರುವ ಫರ್ಲ್ ಪಾಲಿಫಿಲಂ ಮ್ಯಾನುಫ್ಯಾಕ್ಚರಿಂಗ್ ಘಟಕದಿಂದ 5 ಟನ್ ಪ್ಲಾಸ್ಟಿಕ್ ವಶಪಡಿಸಿಕೊಂಡು ₹10 ಲಕ್ಷ ದಂಡ ವಿಧಿಸಿದ್ದಾರೆ.
BSWML ಸಿಇಒ ಕರೀಗೌಡ ಅವರು ಈ ಕುರಿತು ಮಾತನಾಡಿ, “ಬೆಂಗಳೂರು ನಗರವನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಾವು ಬದ್ಧರಾಗಿದ್ದೇವೆ. ಪುನಃ ಅಕ್ರಮವಾಗಿ ಪ್ಲಾಸ್ಟಿಕ್ ಬಳಸುವವರು ಇನ್ನಷ್ಟು ಕಠಿಣ ಕ್ರಮಕ್ಕೆ ಗುರಿಯಾಗುತ್ತಾರೆ,” ಎಂದು ಎಚ್ಚರಿಕೆ ನೀಡಿದರು.
ಈ ಘಟಕಕ್ಕೆ ಅಧಿಕಾರಿಗಳು ಈ ಹಿಂದೆ ಹಲವು ಬಾರಿ ನೋಟಿಸ್ ನೀಡಿದ್ದರೂ, ಅಕ್ರಮವಾಗಿ ಬ್ಯಾನ್ ಮಾಡಲಾದ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಸಂಗ್ರಹಣೆ ಮುಂದುವರೆದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಂಯುಕ್ತ ದಾಳಿ ನಡೆಸಿತು.
ದಾಳಿಯ ಸಮಯದಲ್ಲಿ 5 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ ಘಟಕದಲ್ಲಿದ್ದ ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಿಶ್ಲೇಷಣೆಗೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಈ ದಾಳಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜು, BSWML ಡಿಜಿಎಂ, ಪೊಲೀಸರು ಮತ್ತು ಮಾರ್ಷಲ್ಗಳು ಉಪಸ್ಥಿತರಿದ್ದರು.
ಕರೀಗೌಡ ಅವರು, “ನಗರವನ್ನು ಪರಿಸರ ಸ್ನೇಹಿ ಮತ್ತು ಶಾಶ್ವತ ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ವಿರುದ್ಧ ಇನ್ನಷ್ಟು ಬೃಹತ್ ದಾಳಿಗಳು ನಡೆಯಲಿವೆ,” ಎಂದು ತಿಳಿಸಿದರು.