Home ಮಂಡ್ಯ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

12
0

ಬೆಂಗಳೂರು/ಮಂಡ್ಯ: ಜಿಲ್ಲೆಯ ಜೀವನಾಡಿ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಕಾವೇರಿ ನದಿಗೆ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹರಿಯಬಿಡಲಾಗಿದ್ದು, ಎರಡು ವರ್ಷದ ನಂತರ ಮತ್ತೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದಾಳೆ.

ಕಾವೇರಿ ಜಲಾನಯನಪ್ರದೇಶದಲ್ಲಿ ಮಳೆ ಮುಂದುವರಿದಿರುವುದು ಹಾಗೂ ಹಾರಂಗಿ ಮತ್ತು ಹೇಮಾವತಿ ಜಲಾಶಯದಿಂದಲೂ ಕೆಆರ್‌ಎಸ್‌ಗೆ ಗಣನೀಯ ಪ್ರಮಾಣದಲ್ಲಿ ನೀರುಹರಿದುಬರುತ್ತಿದ್ದು, ಜಲಾಶಯದ ಹೊರಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

ರವಿವಾರ ಬೆಳಗ್ಗೆ 8 ಗಂಟೆ ವೇಳೆಗೆ ಜಲಾಶಯದ ನೀರಿನಮಟ್ಟ ಗರಿಷ್ಠಮಟ್ಟ 122.70 ಅಡಿ(ಗರಿಷ್ಠಮಟ್ಟ 124.80 ಅಡಿ) ತಲಪಿದೆ. ಜಲಾಶಯದ ಸುರಕ್ಷತೆ ದೃಷ್ಠಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಕಾವೇರಿ ನೀರಾವರಿ ನಿಗಮದ ಕೆಆರ್‌ಎಸ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮನವಿ ಮಾಡಿದ್ದಾರೆ.

ಮೈದುಂಬಿರುವ ಕೆಆರ್‌ಎಸ್ ಜಲಾಶಯದಲ್ಲಿ ಜು.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿಗೆ ಬಾಗೀನ ಅರ್ಪಣೆ ಮಾಡಲಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.

ರವಿವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಜಿಲ್ಲೆಯ ಶಾಸಕರು, ಸಂಸದರು, ಇತರ ಮುಖಂಡರು ಉಪಸ್ಥಿತರಿರುತ್ತಾರೆ ಎಂದರು.

ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವುದು ಜಿಲ್ಲೆಯ ಜನರಿಗೆ ಅತೀವ ಹರ್ಷವನ್ನುಂಟು ಮಾಡಿದೆ. ಎಲ್ಲ ಹಬ್ಬಗಳಿಗಿಂತಲೂ ಜಲಾಶಯ ಭರ್ತಿಯಾಗಿ ಸಂಭ್ರಮಿಸುವುದೇ ಜಿಲ್ಲೆಯ ರೈತರು, ಜನರಿಗೆ ದೊಡ್ಡಹಬ್ಬ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕೆಆರ್‌ಎಸ್ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನಾಳೆ(ಜು.22)ಬೆಳಗ್ಗೆ 7.45ಕ್ಕೆ ಕೆಆರ್‌ಎಸ್‌ಗೆ ಭೇಟಿ ಪರಿಶೀಲನೆ ನಡೆಸಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

 

 

LEAVE A REPLY

Please enter your comment!
Please enter your name here