ಬೆಂಗಳೂರು, ಫೆ.21: ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಒಟ್ಟು ₹5,065 ಕೋಟಿ ವೆಚ್ಚ ಮಾಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ ನಗರದಲ್ಲಿನ ಎಲ್ಲಾ ರಸ್ತೆಗಳಿಗೆ ಬ್ಲಾಕ್ ಟಾಪಿಂಗ್ ಮತ್ತು ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗುವ ಮುನ್ನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ಮೂರು ತಿಂಗಳಲ್ಲಿ ₹2,671 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿವೆ. ಇದರಲ್ಲಿ ಔಟರ್ ವರ್ತುಲ ರಸ್ತೆಗೆ (ORR) ಎರಡು ಪ್ಯಾಕೇಜ್ಗಳಲ್ಲಿ ₹420 ಕೋಟಿ, 82 ವಾರ್ಡ್ ರಸ್ತೆ ಪ್ಯಾಕೇಜ್ಗಳಿಗೆ ₹1,000 ಕೋಟಿ ಹಾಗೂ ಕರ್ನಾಟಕ ಸರ್ಕಾರದ ಅನುದಾನದಲ್ಲಿ 81 ಪ್ಯಾಕೇಜ್ಗಳಿಗೆ ₹1,241 ಕೋಟಿ ಸೇರಿವೆ ಎಂದು ವಿವರಿಸಿದರು.
ಈ ಕಾಮಗಾರಿಗಳಲ್ಲಿ 80% ಟೆಂಡರ್ ಕರೆಯಲಾಗಿದ್ದು, ಪ್ರಗತಿ ಕುರಿತು ಪ್ರತಿದಿನ ಫೋಟೋ ಸಮೇತ ಮಾಹಿತಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಅಧಿಕಾರಿಗೆ ಸ್ಪಷ್ಟ ಹೊಣೆಗಾರಿಕೆ ನಿಗದಿಪಡಿಸಲಾಗಿದೆ ಎಂದರು.
ಕಳೆದ ವರ್ಷ 389 ಕಿ.ಮೀ ರಸ್ತೆಗಳ ಬ್ಲಾಕ್ ಟಾಪಿಂಗ್ಗೆ ₹694 ಕೋಟಿ ಹಾಗೂ ವೈಟ್ ಟಾಪಿಂಗ್ಗೆ ₹1,700 ಕೋಟಿ ಸೇರಿ ₹2,394 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ವಿಶ್ವ ಬ್ಯಾಂಕ್ ನೆರವಿನಿಂದ ₹1,600 ಕೋಟಿ ಮೊತ್ತದ ಕೆನಾಲ್ ಲಿಂಕ್ ಲೈನಿಂಗ್ ಕಾಮಗಾರಿಗೂ ಟೆಂಡರ್ ಕರೆಯಲಾಗಿದ್ದು, ಕೆಲಸ ಆರಂಭವಾಗಿದೆ ಎಂದರು.
ಕಾಮಗಾರಿಗಳ ಉದ್ಘಾಟನೆಗಾಗಿ ಶಾಸಕರು ಅಥವಾ ಮಂತ್ರಿಗಳಿಗಾಗಿ ಕಾಯಬೇಡಿ. ಕೆಲಸವನ್ನು ತಕ್ಷಣ ಆರಂಭಿಸಿ ನಂತರ ಪೂಜೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದು, ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಪ್ರಮುಖ ಗುರಿಯಾಗಿದೆ.
