Home ಬೆಂಗಳೂರು ನಗರ ಕೃಷಿ ಇಲಾಖೆಯಲ್ಲಿ 5195 ಖಾಲಿ ಹುದ್ದೆ: ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಚೆಲುವರಾಯಸ್ವಾಮಿ ಸೂಚನೆ

ಕೃಷಿ ಇಲಾಖೆಯಲ್ಲಿ 5195 ಖಾಲಿ ಹುದ್ದೆ: ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಚೆಲುವರಾಯಸ್ವಾಮಿ ಸೂಚನೆ

93
0
Karnataka Agriculture Minister N Chaluvarayaswamy
Karnataka Agriculture Minister N Chaluvarayaswamy

ಬೆಂಗಳೂರು:

ಕೃಷಿ ಇಲಾಖೆಗೆ ಒಟ್ಟು 8982 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 3787 ಹುದ್ದೆಗಳು ಭರ್ತಿಯಾಗಿವೆ. 5195 ಹುದ್ದೆಗಳು ಖಾಲಿ ಇರುತ್ತವೆ‌. ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಮಂಗಳವಾರ ಸೂಚನೆ ನೀಡಿದ್ದಾರೆ.

ಕೃಷಿ ಇಲಾಖೆ ಜವಾಬ್ದಾರಿವಹಿಸಿಕೊಂಡ ಬಳಿಕ ಇಂದು ವಿಧಾನಸೌಧದಲ್ಲಿ ಮೊದಲ ಬಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪರಿಚಯಾತ್ಮಕ ಹಾಗೂ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಇಲಾಖೆಯ ಯೋಜನೆಗಳು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಕೃಷಿ ಇಲಾಖೆಯಲ್ಲಿ ಶೇ‌.58% ನಷ್ಟು ಹುದ್ದೆಗಳು ಖಾಲಿಯಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಲು ವಿಳಂಬ ಆಗಲಿದೆ. ಆ ನಿಟ್ಟಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಅವಶ್ಯವಿದೆ. ಹಾಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಎಚ್ಚರಿಕೆವಹಿಸಿ

ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿ ಎಂದು ಚಲವರಾಯಸ್ವಾಮಿ ಅವರು ಸೂಚಿಸಿದರು.

ಪೂರ್ವ ಮುಂಗಾರಿನಲ್ಲಿ ವಾಡಿಕೆಯಾಗಿ 108 ಮಿಮಿ ಮಳೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 108 ಮಿ ಮೀ ಮಳೆಯಾಗಿದ್ದು, ಯಾವುದೇ ಕೊರತೆ ಆಗಿರುವುದಿಲ್ಲ.

2022-23 ನೇ ಸಾಲಿನ ಮೂರನೇ ಮುಂಗಡ ಅಂದಾಜಿನಂತೆ 139.28 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಅಂದಾಜಿಸಲಾಗಿದೆ.

2023 ರ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.

ಪೂರ್ವ ಮುಂಗಾರು ಬೆಳೆಗಳ 2.95 ಲಕ್ಷ ಹೆಕ್ಟೇರ್ ಗುರಿಯಿದ್ದು, ಇದುವರೆಗೆ 2.48 ಲಕ್ಷ ಹೆಕ್ಟೇರ್ (84%)ಪ್ರದೇಶದಲ್ಲಿ ಕೈಗೊಳ್ಳಲಾಗಿರುತ್ತದೆ.
5.54 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, 7.85 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳು ಲಭ್ಯವಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

2023-24 ಸಾಲಿನ ಮುಂಗಾರು ಹಂಗಾಮಿಗೆ 25.47 ಲಕ್ಷ ಮೆ.ಟನ್ ರಸಗೊಬ್ಬರ ಬೇಡಿಕೆ ಇದೆ. 7.30 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ.

ಪ್ರಸ್ತುತ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ 13.90 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

1.68 ಲಕ್ಷ ಮೆ ಟನ್ ರಸಗೊಬ್ಬರ ಕಾಪು ದಾಸ್ತಾನು(Buffer Stock)ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಪ್ರಸ್ತುತ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು. ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು. ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ಅವರು ಸೂಚನೆ ನೀಡಿದರು.

ಇದರ ಜೊತೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ AOಗಳು ಹಾಜರಿರಬೇಕು. Soil Test ರಿಪೋರ್ಟ್ ಗಳನ್ನು ಸೂಕ್ತ ಸಮಯದಲ್ಲಿ ನೀಡಬೇಕು. ಬೆಳೆ ವಿಮೆ ನೀಡುವಲ್ಲಿ ರೈತರಿಗೆ ಸಮಸ್ಯೆ ಆಗಬಾರದು. ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆಯಾದರೂ ಜಂಟಿ ನಿರ್ದೇಶಕರೇ ನೇರ ಹೊಣೆ ಆಗ್ತೀರಾ ಎಂದು ಸಚಿವರು ಎಚ್ಚರಿಕೆ ನೀಡಿದರು.

ನೆಟೆರೋಗದಿಂದ ತೊಗರಿಬೆಳೆ ಹಾನಿಗೆ ಶೀಘ್ರದಲ್ಲೇ ಪರಿಹಾರ ಬಿಡುಗಡೆ

2022-23ನೇ ಸಾಲಿನಲ್ಲಿ ನೆಟೆ ರೋಗದಿಂದ ಕಲಬುರಗಿ ಜಿಲ್ಲೆಯಲ್ಲಿ 198488 ಹೆಕ್ಟೇರ್, ಬೀದರ್ ಜಿಲ್ಲೆಯಲ್ಲಿ 14495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20401 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿರುತ್ತದೆ. ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪರಿಹಾರದಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿಗಳ ಅನುದಾನ ಘೋಷಿಸಲಾಗಿದ್ದು, ಶೀಘ್ರದಲ್ಲೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದರು.‌

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here