ಬೆಳಗಾವಿ: ಕರ್ನಾಟಕದ ವನ್ಯಜೀವಿಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ನಡೆದ ಇತ್ತೀಚಿನ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 6,395 ಆನೆಗಳು ಮತ್ತು 563 ಹುಲಿಗಳು ಇರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯ ಡಾ. ತಿಮ್ಮಯ್ಯ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಸರ್ಕಾರ ಬಹುಮುಖ ತಂತ್ರಗಳನ್ನು ಜಾರಿಗೆ ತಂದಿದೆ ಎಂದು ಸ್ಪಷ್ಟಪಡಿಸಿದರು.
ಮಾನವ ಪ್ರಾಣಹಾನಿಗೆ ಕಾರಣವಾಗಿರುವ ನಿರ್ದಿಷ್ಟ ಆನೆಗಳು ಹಾಗೂ ಹುಲಿಗಳನ್ನು ಗುರುತಿಸಿ ಸೆರೆಹಿಡಿಯುವ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘರ್ಷ ಹೆಚ್ಚಿರುವ ಅರಣ್ಯದಂಚಿನ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಳ್ಳಬೇಟೆ ನಿಗಾ ಶಿಬಿರಗಳ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಸಂವೇದನಾಶೀಲ ಪ್ರದೇಶಗಳಿಗೆ ಸ್ಥಳಾಂತರಿಸಿ, ಮುಂದಿನ ಮೂರು ತಿಂಗಳು ನಿರಂತರ ಗಸ್ತು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರತಿ ಸಂಘರ್ಷಪ್ರವಣ ವನ್ಯಜೀವಿ ವಲಯದಲ್ಲಿ ಕ್ಷಿಪ್ರ ಸ್ಪಂದನ ತಂಡಗಳು (RRT) ರಚಿಸಲಾಗಿದ್ದು, ಡ್ರೋನ್, ಕ್ಷಿಪ್ರ ಸ್ಪಂದನ ವಾಹನಗಳು ಹಾಗೂ ಇತರೆ ತಂತ್ರಜ್ಞಾನ ಉಪಕರಣಗಳ ಮೂಲಕ ತಕ್ಷಣದ ಪ್ರತಿಕ್ರಿಯೆ ನೀಡಲಾಗುತ್ತಿದೆ. ಈ ತಂಡಗಳಿಗೆ ಆನೆ ಕಾರ್ಯಪಡೆ, ವಿಶೇಷ ಹುಲಿ ಸಂರಕ್ಷಣಾ ದಳ (STPF) ಸೇರಿದಂತೆ ಈಗಿರುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅರಣ್ಯದ ಗಡಿಭಾಗಗಳಲ್ಲಿ GSM ಆಧಾರಿತ ರಿಯಲ್-ಟೈಂ ಸರ್ವೆಲ್ಯಾನ್ಸ್ ಕ್ಯಾಮೆರಾಗಳನ್ನು ‘ಗರೂಡಾ’ ಸಾಫ್ಟ್ವೇರ್ನೊಂದಿಗೆ ಅಳವಡಿಸಲಾಗಿದೆ, ಇದರಿಂದ ವನ್ಯಜೀವಿಗಳ ಚಲನವಲನವನ್ನು ತಕ್ಷಣವೇ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ. ಹುಲಿ ಸಂರಕ್ಷಿತ ಪ್ರದೇಶಗಳ ಅಂಚುಗಳಲ್ಲಿ ಹೆಚ್ಚುವರಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಸ್ಥಾಪಿಸಿ ನಿಗಾವ್ಯವಸ್ಥೆ ಬಲಪಡಿಸಲಾಗಿದೆ.
ಕಾಡಾನೆಗಳು ಅರಣ್ಯದಿಂದ ಹೊರಬರದಂತೆ ತಡೆಯಲು ಸೌರಶಕ್ತಿ ಬೇಲಿ, ಆನೆತಡೆ ಕಂದಕಗಳು, ರೈಲ್ವೆ ಹಳಿಗಳ ಮೂಲಕ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 428 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅರಣ್ಯ ಪ್ರದೇಶದ ಒಳಗೆ ನೀರಿನ ಸಂಪನ್ಮೂಲಗಳು ಮತ್ತು ಆವಾಸಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಾನವ–ವನ್ಯಜೀವಿ ಸಂಘರ್ಷವನ್ನು ದೀರ್ಘಾವಧಿಯಲ್ಲಿ ನಿಯಂತ್ರಿಸಲು 5 ವರ್ಷಗಳ ಸಮಗ್ರ ಸ್ಟ್ರಾಟೆಜಿಕ್ ಪ್ಲಾನ್ ತಯಾರಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ ಇದೆ ಎಂದು ಖಂಡ್ರೆ ಹೇಳಿದರು.
