ಹೊಸದಿಲ್ಲಿ : ಭಾರತದ ಜಿಮ್ನಾಸ್ಟ್ ಪ್ರತಿಭೆ ದೀಪಾ ಕರ್ಮಾಕರ್ ಎಂಟು ವರ್ಷಗಳ ಬಳಿಕ ಸೀನಿಯರ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ರಾಷ್ಟ್ರೀಯ ಚಾಂಪಿಯನ್‍ಶಿಪ್ಸ್‍ನಲ್ಲಿ ಸ್ಪರ್ಧಿಸಲಿದ್ದಾರೆ. ಸ್ಪರ್ಧೆಯು ಭುವನೇಶ್ವರದಲ್ಲಿ ಜನವರಿ 2ರಿಂದ 4ರವರೆಗೆ ನಡೆಯಲಿದೆ.
ಈ ಚಾಂಪಿಯನ್‍ಶಿಪ್ಸ್‍ನಲ್ಲಿ ದೀಪಾ ಅಲ್ಲದೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಪ್ರಣತಿ ನಾಯಕ್, ಯೋಗೇಶ್ವರ್ ಸಿಂಗ್, ರಾಕೇಶ್ ಪಾತ್ರ, ತಪನ್ ಮೊಹಾಂತಿ, ಸೈಫ್ ತಂಬೋಲಿ, ಗೌರವ್ ಕುಮಾರ್ ಮುಂತಾದವರು ಭಾಗವಹಿಸುತ್ತಿದ್ದಾರೆ.
“ದೀಪಾ ಸೀನಿಯರ್ ನ್ಯಾಶನಲ್ಸ್ ನಲ್ಲಿ ಸ್ಪರ್ಧಿಸುತ್ತಾರೆ. ಅವರು ದೇಶಿ ಪಂದ್ಯಾವಳಿಯೊಂದರಲ್ಲಿ ಕೊನೆಯ ಬಾರಿ ಸ್ಪರ್ಧಿಸಿದ್ದು 2015ರಲ್ಲಿ. ಇದು ಅವರ ಕೊನೆಯ ನ್ಯಾಶನಲ್ಸ್’’ ಎಂದು ಅವರ ಕೋಚ್ ಬಿಸ್ವೇಸ್ವರ ನಂದಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಅಗರ್ತಲ ನಿವಾಸಿಯಾಗಿರುವ 30 ವರ್ಷದ ದೀಪಾ ಕರ್ಮಾಕರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಆಗಿದ್ದಾರೆ.
ಟ್ರಯಲ್ಸ್‍ನಲ್ಲಿ ಅವರು ಎಲ್ಲರಿಗಿಂತಲೂ ಹೆಚ್ಚಿನ ನಿರ್ವಹಣೆ ನೀಡಿದ್ದರೂ, ಅವರು ಏಶ್ಯನ್ ಗೇಮ್ಸ್‍ಗೆ ಆಯ್ಕೆಯಾಗಿರಲಿಲ್ಲ. ಯಾಕೆಂದರೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನದಂಡವನ್ನು ತಲುಪಲು ಅವರಿಗೆ ಸಾಧ್ಯವಾಗಿರಲಿಲ್ಲ. ಹಾಲಿ ಏಶ್ಯನ್ ಗೇಮ್ಸ್‍ಗೆ ಆಯ್ಕೆಯಾಗಬೇಕಾದರೆ, ಕಳೆದ ಏಶ್ಯನ್ ಗೇಮ್ಸ್‍ನಲ್ಲಿ ಎಂಟನೇ ಸ್ಥಾನ ಪಡೆದ ಜಿಮ್ನಾಸ್ಟ್‍ನ ನಿರ್ವಹಣೆಗೆ ಸಮವಾದ ನಿರ್ವಹಣೆಯನ್ನು ಸ್ಪರ್ಧಿಗಳು ನೀಡಬೇಕು ಎನ್ನುವುದು ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನದಂಡವಾಗಿದೆ.
ಉದ್ದೀಪನ ದ್ರವ್ಯ ಸೇವನೆ ಆರೋಪದಲ್ಲಿ 21 ತಿಂಗಳುಗಳ ಕಾಲ ಅಮಾನತಿಗೆ ಒಳಗಾದ ಬಳಿಕ ದೀಪಾ ಕರ್ಮಾಕರ್ ಗೆ ಯಾವುದೇ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.