ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಉತ್ತರ ಕಾಶಿಯ ಸಹಸ್ತ್ರ ತಾಲ್ ಕಣಿವೆ ಪ್ರಾಂತ್ಯದಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ 22 ಚಾರಣಿಗರ ಪೈಕಿ ಒಂಬತ್ತು ಮಂದಿ ಮೃತಪಟ್ಟಿದ್ದು, 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಮೃತದೇಹಗಳನ್ನು ಏರ್ ಲಿಫ್ಟ್ ಮಾಡುವ ಮೂಲಕ ಡೆಹ್ರಾಡೂನ್‌ಗೆ ತಂದು, ಮರಣೋತ್ತರ ಪರೀಕ್ಷೆಯ ನಂತರ ಗುರುವಾರ ಬೆಂಗಳೂರಿಗೆ ಸಾಗಿಸಲಾಗಿದೆ. ಭಾರಿ ಹಿಮಪಾತ ಸಂಭವಿಸಿದ್ದರಿಂದ ಮಾರ್ಗ ಮಧ್ಯದಲ್ಲಿ 22 ಮಂದಿ ಚಾರಣಿಗರ ತಂಡ ಸಿಲುಕಿಕೊಂಡಿತ್ತು.
ರಕ್ಷಿಸಲಾಗಿರುವ 13 ಮಂದಿ ಚಾರಣಿಗರ ಪೈಕಿ 9 ಮಂದಿ ಚಾರಣಿಗರನ್ನು ಡೆಹ್ರಾಡೂನಿನ ಅತಿಥಿ ಗೃಹವೊಂದರಲ್ಲಿ ಇರಿಸಲಾಗಿದೆ. ಉಳಿದ ಐದು ಮಂದಿ ಚಾರಣಿಗರನ್ನು ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ರವಾನಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ನಡುವೆ, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಉತ್ತರಾಖಂಡಕ್ಕೆ ಧಾವಿಸಿದ್ದಾರೆ.