ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಟದ ಮೈದಾನದ ಗೇಟ್ ಮೈಮೇಲೆ ಬಿದ್ದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ವರದಿಯಾಗಿದೆ. ನಿರಂಜನ್(11) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ.
ಕಬ್ಬಿಣದ ಗೇಟ್ ಮೈಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ನಿರಂಜನ್, ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮಗುವಾದ ನಿರಂಜನ್, ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ.ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಕೊನೆಯುಸಿರೆಳೆದಿದೆ.
ಮೃತ ನಿರಂಜನ್ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ಜೊತೆಗೆ ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಫೈಪ್ ಲೈನ್ನಲ್ಲಿ ಈ ಕುಟುಂಬ ವಾಸವಾಗಿತ್ತು. ಇನ್ನು ಘಟನೆ ಬಳಿಕ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.