ಬೆಂಗಳೂರು: ಕೇಂದ್ರ ಸರ್ಕಾರ ನೀಡಿದ ₹1,323.96 ಕೋಟಿ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ನಿಗದಿತ ಉದ್ದೇಶಗಳಿಗೆ ಬಳಸದೇ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸು ಇಲಾಖೆಯ ಒತ್ತಾಯದ ಮೇರೆಗೆ ಸಂಬಂಧಿತ ಇಲಾಖೆಗಳು ನಕಲಿ (ಫ್ಯಾಬ್ರಿಕೇಟೆಡ್) ಹಣಬಳಕೆ ಪ್ರಮಾಣಪತ್ರಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆಯೇ ಎಂಬ ಪ್ರಶ್ನೆ ಎತ್ತಿದರು. ಈ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
2025ರ ಜುಲೈ 1ರಂದು ಬಂಡವಾಳ ಹೂಡಿಕೆ ಉದ್ದೇಶಕ್ಕಾಗಿ ಈ ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದ ವಿಜಯೇಂದ್ರ, ಕರ್ನಾಟಕ ಸಣ್ಣ ನೀರಾವರಿ ಇಲಾಖೆ, ಕೃಷ್ಣ ಭಾಗ್ಯ ಜಲನಿಗಮ ಹಾಗೂ ವಿಶ್ವೇಶ್ವರಯ್ಯ ಜಲನಿಗಮಗಳು ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಹೇಳಿದರು. ಆದರೆ, ಅವು ನಿಜವಾದ ಪ್ರಮಾಣಪತ್ರಗಳೇ ಅಥವಾ ಒತ್ತಾಯದಿಂದ ನೀಡಲ್ಪಟ್ಟವೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈ ಅನುದಾನ ಬಡ್ಡಿರಹಿತವಾಗಿದ್ದು, ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಮೀಸಲಾಗಿತ್ತು ಎಂದು ಅವರು ಹೇಳಿದರು. ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದರೆ ಅದು ಗಂಭೀರ ಹಣಕಾಸು ಅಕ್ರಮವಾಗುತ್ತದೆ ಎಂದು ಎಚ್ಚರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಉದಾಹರಣೆ ನೀಡಿ, ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ ದೊಡ್ಡ ಮೊತ್ತದ ಹಣ ವರ್ಗಾವಣೆ ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು. ಸಾವಿರಾರು ನಕಲಿ ಖಾತೆ ತೆರೆಯುವ ಮೂಲಕ ಹಣ ದುರ್ಬಳಕೆ ಮಾಡಿದ ಪ್ರಕರಣ ತನಿಖೆಯಲ್ಲಿದೆ ಎಂದು ಅವರು ಗಮನ ಸೆಳೆದರು.
ಇದೇ ವೇಳೆ ₹5,000 ಕೋಟಿ ಗೃಹಲಕ್ಷ್ಮಿ ಯೋಜನೆ ನಿಧಿ ಕುರಿತು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು. ಉಪಯೋಗ ಆಗಿದೆಯೇ, ದುರುಪಯೋಗ ಆಗಿದೆಯೇ, ಅಥವಾ ಭ್ರಷ್ಟಾಚಾರ ನಡೆದಿದೆಯೇ ಎಂಬ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು. ಸರ್ಕಾರದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.
