ಬೆಳಗಾವಿ:
ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕಗಳು ಕಾನೂನು ಉಲ್ಲಂಘನೆ ಸಂಬಂಧ ದೂರುಗಳಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಡ್ರೋಣ್ ಸರ್ವೆ ನಡೆಸಲಾಗುತ್ತಿದೆ. ಸರ್ವೆ ವರದಿ ಬಂದ ಬಳಿಕ ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಎಂ.ಸಿ.ಸುಧಾಕರ್ (Minister MC Sudhakar) ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಬಸನಗೌಡ ದದ್ದಲ್ ಕೇಳಿದ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ಪರವಾಗಿ ಉತ್ತರಿಸಿದ ಅವರು, ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕಗಳು ನಿಯಮ ಉಲ್ಲಂಘನೆ ವಿರುದ್ದ ಐದುಪಟ್ಟು ದಂಡ ವಿಧಿಸಲಾಗುತ್ತಿದೆ. ಪರವಾನಗೆ ನಿಗದಿ ವ್ಯಾಪ್ತಿ ಮೀರಿ ಗಣಿಗಾರಿಕೆ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ಟೋನ್ ಕ್ರಷರ್ ಘಟಕಗಳಿಂದ ಧೂಳು ಹೊರಕ್ಕೆ ಹೋಗದಂತೆ ತಡೆಗಟ್ಟಲು ದೊಡ್ಡ ಪ್ರಮಾಣದಲ್ಲಿ ಧೂಳು ತಡೆ ವ್ಯವಸ್ಥೆಯನ್ನು ಆಳವಡಿಸಲು ಕ್ರಷರ್ ಮಾಲಕರಿಗೆ ಸೂಚಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಕ್ರಷರ್ ಗುತ್ತಿಗೆ ಪ್ರದೇಶದಲ್ಲಿ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದ ಜತೆಗೆ ಪರಿಸರ ಸಂರಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.