ಬೆಂಗಳೂರು : ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕಾಲೇಜು ಆಡಿಟೋರಿಯಂನಲ್ಲಿ ನಡೆದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ʼ18 ವರ್ಷಕ್ಕಿಂತ ಕೆಳಗಿನ ಬಾಲಕ, ಬಾಲಕಿಯರು ಎಷ್ಟೇ ಬುದ್ಧಿವಂತರಿದ್ದರೂ ಅವರು ಮೊಬೈಲ್, ವಾಹನ ಸೇರಿದಂತೆ ಇನ್ನಿತರ ತಂತ್ರಜ್ಞಾನ ಬಳಕೆ ಮಾಡಿದರೂ ಅವರಿಗೆ ಪ್ರಬುದ್ಧತೆ ಇರುವುದಿಲ್ಲʼ ಎಂದರು.
ಒಬ್ಬ ವ್ಯಕ್ತಿಗೆ 18 ವರ್ಷದ ನಂತರ ಡ್ರೈವಿಂಗ್ ಲೈಸೆನ್ಸ್ ಕೊಡಲು ವೈಜ್ಞಾನಿಕ ಕಾರಣಗಳಿವೆ. ಅಪ್ರಾಪ್ತರಿಗೆ ಮೆದುಳು ಹೆಚ್ಚು ಪ್ರಬುದ್ಧತೆ ಹೊಂದಿರುವುದಿಲ್ಲ. ನಮ ಮಕ್ಕಳು ಹೆಚ್ಚು ಬುದ್ಧಿವಂತರು, 10 ವರ್ಷಕ್ಕೇ ದ್ವಿಚಕ್ರ ವಾಹನ, 15 ವರ್ಷಕ್ಕೆ ಕಾರು ಚಲಾಯಿಸುತ್ತಾರೆ ಎಂದು ಪೋಷಕರು ತಮ ಮಕ್ಕಳಿಗೆ ವಾಹನದ ಕೀ ಕೊಟ್ಟರೆ ಅವರ ಕೈಗೆ ಆಯುಧ ಕೊಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಜ್ಯುವಿನೈಲ್ ಜಸ್ಟೀಸ್ ಆ್ಯಕ್ಟ್‍ನಲ್ಲಿ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಬಿ.ದಯಾನಂದ್ ಎಚ್ಚರಿಕೆ ನೀಡಿದರು.
ಪುಣೆಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಐಷಾರಾಮಿ ಕಾರೊಂದನ್ನು ಉದ್ಯಮಿಯೊಬ್ಬರು ತಮ್ಮ ಮಗನಿಗೆ ಕೊಟ್ಟು ಇಬ್ಬರ ಸಾವಿಗೆ ಕಾರಣವಾಗಿದ್ದರು. ಕುಡಿದು ವಾಹನ ಚಲಾಯಿಸುವುದು, ವ್ಹೀಲಿಂಗ್‍ನಂತಹ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರು ಭಾಗಿಯಾಗಿದ್ದಲ್ಲಿ ಅವರ ತಂದೆ-ತಾಯಿ ಜೈಲಿಗೆ ಹೋಗಬೇಕಾಗುತ್ತದೆ ಎಂದು ಬಿ.ದಯಾನಂದ್ ಎಚ್ಚರಿಸಿದರು.