ಬೆಂಗಳೂರು: ದೇಶದಲ್ಲಿ ಉಂಟಾದ ಎಲ್ಪಿಜಿ ಕೊರತೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ ಎಲ್ಪಿಜಿ ಸಿಲಿಂಡರ್ ಪೂರೈಕೆ ಆರಂಭವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯಕ್ಕೆ ಈಗ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಪೂರ್ವ ಮಟ್ಟದ 68%ರವರೆಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಅವರು ಹೇಳಿದರು. ಇಂದಿನಿಂದಲೇ ಹೆಚ್ಚುವರಿ ಸಿಲಿಂಡರ್ ವಿತರಣೆಯೂ ಪ್ರಾರಂಭವಾಗಿದ್ದು, ಅಗತ್ಯತೆ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆದ್ಯತೆ ಆಧಾರಿತ ಹಂಚಿಕೆ ವ್ಯವಸ್ಥೆಯಲ್ಲಿ ಮೊದಲಿಗೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳಿಗೆ ದಿನಕ್ಕೆ ಸುಮಾರು 4,200 ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಸರ್ಕಾರಿ ಮತ್ತು ಪಿಎಸ್ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ಮತ್ತು ಬಸ್ ನಿಲ್ದಾಣಗಳ ಕ್ಯಾಂಟೀನ್ಗಳಿಗೆ 1,200 ಸಿಲಿಂಡರ್ ನೀಡಲಾಗುತ್ತದೆ.
ಹೋಟೆಲ್ ಮತ್ತು ಆಹಾರ ಉದ್ಯಮಕ್ಕೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದ್ದು, ಹೋಟೆಲ್, ಡಾಬಾ, ರೆಸ್ಟೋರೆಂಟ್, ಕೆಎಂಎಫ್, ಪಿಜಿ ಹಾಗೂ ಸಮುದಾಯ ಅಡುಗೆ ಕೇಂದ್ರಗಳಿಗೆ ದಿನಕ್ಕೆ 17,500 ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಇದು ಈ ಹಿಂದೆ ಇದ್ದ 10,000 ಸಿಲಿಂಡರ್ಗಿಂತ ಬಹಳ ಹೆಚ್ಚಾಗಿದೆ.
ಕೃಷಿ, ಬೀಜ ಸಂಸ್ಕರಣೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ರೇಷ್ಮೆ ಕ್ಷೇತ್ರಗಳಿಗೆ 6,000 ಸಿಲಿಂಡರ್ ನೀಡಲಾಗುತ್ತದೆ. ಇತರೆ ಅಗತ್ಯಗಳಿಗೆ 563 ಸಿಲಿಂಡರ್ ಮೀಸಲಾಗಿದೆ. ಒಟ್ಟು ದಿನಕ್ಕೆ 29,463 ಕಮರ್ಷಿಯಲ್ ಸಿಲಿಂಡರ್ ವಿತರಣೆ ನಡೆಯಲಿದೆ.
ಇದರ ಜೊತೆಗೆ, ಗ್ಯಾಸ್ ಏಜೆನ್ಸಿಗಳ ವಿರುದ್ಧ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದು, ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಪರವಾನಗಿ ರದ್ದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ 27 ಎಫ್ಐಆರ್ ದಾಖಲಾಗಿ, 1,169 ಪ್ರಕರಣಗಳು ದಾಖಲಾಗಿದ್ದು, 1,603 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ನಗರ ಪ್ರದೇಶಗಳಲ್ಲಿ 25 ದಿನಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 45 ದಿನಗಳಲ್ಲಿ ಗೃಹಬಳಕೆಯ ಸಿಲಿಂಡರ್ ವಿತರಣೆ ನಡೆಯುತ್ತದೆ ಎಂದು ಹೇಳಿದರು.
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಉಂಟಾದ ಎಲ್ಪಿಜಿ ಕೊರತೆ ಇದೀಗ ನಿಯಂತ್ರಣಕ್ಕೆ ಬರುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯದಿಂದ ಪರಿಸ್ಥಿತಿ ಸ್ಥಿರವಾಗುತ್ತಿದೆ ಎಂದು ಅವರು ತಿಳಿಸಿದರು.
