ನವದೆಹಲಿ: ಆದಿತ್ಯ ಬಿರ್ಲಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ (Aditya Birla Insurance Brokers Ltd.) ಅನ್ನು ಮಾರಾಟ ಮಾಡಲು ಕೋಟ್ಯಧಿಪತಿ ಕುಮಾರ ಮಂಗಲಂ ಬಿರ್ಲಾ (Kumar Mangalam Birla) ಒಡೆತನದ ಆದಿತ್ಯಾ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ (Aditya Birla Capital Ltd.) ಮುಂದಾಗಿದೆ ಎಂದು ವರದಿಯಾಗಿದೆ. ಕಂಪನಿಯು ತನ್ನ ಹಣಕಾಸು ಸೇವೆಗಳನ್ನು ಪುನರ್ರಚಿಸಲು ಯತ್ನಿಸುತ್ತಿದ್ದು, ಅದರ ಅಂಗವಾಗಿ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ ಮಾರಾಟಕ್ಕೆ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್ಬರ್ಗ್’ ವರದಿ ಮಾಡಿದೆ. 19 ವರ್ಷ ಹಳೆಯದಾದ ಆದಿತ್ಯ ಬಿರ್ಲಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ ಮಾರಾಟಕ್ಕೆ ಸಂಬಂಧಿಸಿ ಸಂಭಾವ್ಯ ಖರೀದಿದಾರರ ಜತೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದಾಗ್ಯೂ ವ್ಯವಹಾರ ಕುದುರಿಲ್ಲ ಎಂದು ಮೂಲಗಳು ಹೇಳಿವೆ.
ಬಿರ್ಲಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ ಜೀವ ವಿಮೆ ಮತ್ತು ಇತರ ವಿಮಾ ಸೇವೆಯನ್ನು ಒದಗಿಸುತ್ತಿದ್ದು, 2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ 600 ಕೋಟಿ ರೂ. ಆದಾಯ ಗಳಿಸಿತ್ತು.
ಇದನ್ನೂ ಓದಿ: Satellite Spectrum Auction: ಶೀಘ್ರ ಉಪಗ್ರಹ ತರಂಗಗುಚ್ಛ ಹರಾಜು; ಮೊದಲ ದೇಶವಾಗಲಿದೆ ಭಾರತ
ಆದಿತ್ಯಾ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಉದ್ಯಮವನ್ನು ಪುನರ್ರಚಿಸಲು ಮತ್ತು ಆ ಮೂಲಕ ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವಂತೆ ಮಾಡಲು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶಾಖ ಮುಲ್ಯೆ ಪ್ರಯತ್ನಿಸುತ್ತಿದ್ದಾರೆ. ಇದರ ಅಂಗವಾಗಿಯೇ ಇನ್ಶೂರೆನ್ಸ್ ಬ್ರೋಕರ್ಸ್ ಮಾರಾಟಕ್ಕೆ ಮುಂದಾಗಲಾಗಿದೆ ಎಂದು ಮೂಲಗಳು ಹೇಳಿವೆ. 2017ರಲ್ಲಿ ಷೇರುಪೇಟೆಗೆ ಲಗ್ಗೆಯಿಟ್ಟ ಬಳಿಕ ಕಂಪನಿಯ ಷೇರುಗಳು ಉತ್ತಮ ಚೇತರಿಕೆಯನ್ನೇ ಕಂಡಿರಲಿಲ್ಲ. ವಿಶಾಖ ಮುಲ್ಯೆ ಅವರು ಜೂನ್ನಲ್ಲಿ ಸಿಇಒ ಆಗಿ ಕಾರ್ಯಾರಂಭ ಮಾಡಿದ ಬಳಿಕ ಷೇರು ಮೌಲಚ್ಯ ಶೇಕಡಾ 50ರಷ್ಟು ಹೆಚ್ಚಳವಾಗಿದೆ.
ಮಾರ್ಚ್ 31ರ ಒಳಗಾಗಿ ವ್ಯವಹಾರ ಕುದುರಿಸಲು ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಆದಿತ್ಯ ಬಿರ್ಲಾ ಸಮೂಹ ನಿರಾಕರಿಸಿದೆ. ಆದಿತ್ಯ ಬಿರ್ಲಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ ದೇಶದ 11 ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 350 ಜನ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ‘ಬ್ಲೂಮ್ಬರ್ಗ್’ ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ