ಬೆಂಗಳೂರು: ನಗರದಲ್ಲಿನ ವಿದೇಶಿ ದೌತ್ಯ ಕಚೇರಿಗಳಿಗೆ ನಿರಂತರವಾಗಿ ಬೆದರಿಕೆ ಸಂದೇಶಗಳು ಬರುತ್ತಿರುವ ಬೆನ್ನಲ್ಲೇ, ಇದೀಗ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜನವರಿ 29ರಂದು ಕಿಡಿಗೇಡಿಗಳು ಆರ್ಟಿ ನಗರ ಠಾಣಾ ವ್ಯಾಪ್ತಿಯ ಗಂಗಾನಗರದಲ್ಲಿರುವ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಇ-ಮೇಲ್ ಕಳುಹಿಸಿ, ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗೆ ಇದೇ ರೀತಿ ಇಟಲಿ ಹಾಗೂ ಜಪಾನ್ ಕಾನ್ಸುಲೇಟ್ಗಳಿಗೆ ಸಹ ಬೆದರಿಕೆ ಸಂದೇಶಗಳು ಬಂದಿದ್ದವು.
ಈ ಕುರಿತು ರಾಯಭಾರಿ ಕಚೇರಿಯ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಅವರು ಆರ್ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇ-ಮೇಲ್ ಕಳುಹಿಸಿದವರ ಪತ್ತೆಗೆ ಸೈಬರ್ ಕ್ರೈಂ ವಿಭಾಗ ಕಾರ್ಯಪ್ರವೃತ್ತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಯಭಾರಿ ಕಚೇರಿ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ತನಿಖೆ ಮುಂದುವರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
